Smt. Sudha Chidananda Goud,
Lecturer in English, Govt. Pre-University College, Baachigondanahalli, Bellary District.

(‘ಬದುಕು ಪ್ರಿಯವಾಗುವ ಬಗೆ’, ‘ದಿಟ್ಟಿಯು ನಿನ್ನೊಳು ನೆಟ್ಟಿರೆ’ ಮತ್ತು ‘ಬುಡಕ್ಕೆ ಬಂದಾಗ’- ಕಥಾಸಂಕಲನಗಳ ಲೇಖಕಿ)

“ಗೆರೆ ದಾಟಿದ ಮೇಲೆ”: ಸಮಕಾಲೀನ ವಿಶಿಷ್ಟತೆಗಳ ವೈಯಕ್ತಿಕ ದಾಖಲೆ

೧೯೭೧ರ ಕಾಲದಲ್ಲಿ ಕ್ರಿಶ್ಚಿಯನ್ ಯುವತಿಯನ್ನು ಪ್ರೀತಿಸಿ, ಮನಸಿನ ಕರೆಯಂತೆಯೇ ನಡೆದುಕೊಂಡ ಎಂ.ಎಸ್. ಪರಶಿವಮೂರ್ತಿಯವರ ಬದುಕಿನಲ್ಲಿ ಅನೇಕ ಬಣ್ಣಗಳು ಸಕಾರಾತ್ಮಕವಾಗಿ ಮಿಳಿತಗೊಂಡು, ಆಧುನಿಕ ಕರ್ನಾಟಕದ ವಿದ್ಯಾವಂತ, ಯಶಸ್ವೀ ದಲಿತ ಜೀವನವೊಂದು ‘ಗೆರೆ ದಾಟಿದ ಮೇಲೆ’ಯಲ್ಲಿ ದಾಖಲಾಗಿರುವುದಕ್ಕೆ ಬರಹದ ಮೇಲಿನ ಅವರ ಹಿಡಿತವೂ ಕಾರಣವಾಗಿದೆ.

ಆತ್ಮ ಕಥಾನಕಗಳದ್ದು ಸಾಹಿತ್ಯದ ಇತಿಹಾಸದಲ್ಲಿ ವಿಶಿಷ್ಟ ಪರಂಪರೆ.

ದೊಡ್ಡವರ ಆತ್ಮಗಳು ದೊಡ್ಡ ದೊಡ್ಡ ಕಥೆಗಳನ್ನು ದೊಡ್ಡದಾಗಿ ಬರೆದುಕೊಂಡು ಇತರೆಯವರಿಗೆ ಮಾದರಿಯೆನಿಸಿದರೆ, ಹೊಸ ಕಾಲಘಟ್ಟದಲ್ಲಿ ದಲಿತರೂ, ಶೋಷಿತರೂ, ಮಹಿಳೆಯರೂ ತಂತಮ್ಮ ದೇಹದಲ್ಲೂ ಒಂದೊಂದು ಆತ್ಮವಿದೆಯಲ್ಲ ಎಂದು ಮೊದಲ ಬಾರಿಗೆ ಸ್ವತಃ ಅಚ್ಚರಿಗೊಂಡವರಂತೆ ಬರೆಯತೊಡಗಿದ್ದು ವಿಸ್ಮಯ ಹುಟ್ಟಿಸುವ ಹೊಸ ಅಧ್ಯಾಯಕ್ಕೆ ಕಾರಣವಾಯ್ತು ಎನ್ನಲಡ್ಡಿಯಿಲ್ಲ. ಪ್ರಮುಖವಾಗಿ ಸಮಸ್ಯಾತ್ಮಕ ಬದುಕಿನ ಆತ್ಮಕತೆಗಳು ಒಂದೊಂದೂ ಪ್ರತೇಕ ಮೈಲುಗಲ್ಲಾದದ್ದರ ಪರಿಣಾಮವೂ ಅನೇಕ ಮಗ್ಗುಲುಗಳನ್ನು ಒಳಗು ಮಾಡಿಕೊಂಡಿದೆ.

ಈ ಯಾವ ಸಾಹಿತ್ಯಿಕ ಚರ್ಚೆಗಳ ಬಗೆಗೂ ಪರಶಿವಮೂರ್ತಿಯವರು ಎಂದೆಂದೂ ಚಿಂತಿಸಿದವರಲ್ಲ. ಅವರು ಬದುಕನ್ನು ಬಂದಂತೆಯೇ ಸ್ವೀಕರಿಸುತ್ತ ನಡೆದವರು. ಈ ಸ್ವೀಕಾರದಲಿ ಅವರ ಅನುಭವಗಳು ವೈಯಕ್ತಿಕ ನೆಲೆಗಟ್ಟಿನಲ್ಲಿ ಕಂಡುಕೊಂಡ ತೀರ್ಮಾನವಾದವುಗಳು ಮಾತ್ರವೇ ಆಗಿದ್ದರೆ ಬಹುಶಃ ಅದು ಹತ್ತರಲ್ಲಿ ಹನ್ನೊಂದಾಗಿಬಿಡುತ್ತಿತ್ತು. ಆದರವರು ಹೀಗೆ ಆಗಗೊಟ್ಟಿಲ್ಲ. ಕುಟುಂಬ ಒಪ್ಪಲಾರದ ತೀರ್ಮಾನ ತೆಗೆದುಕೊಂಡಿದ್ದಕ್ಕೆ ಅವರ ಬಳಿ ಪ್ರೀತಿಯ ಹೊರತಾಗಿ ಬೇರಾವ ಬೂಟಾಟಿಕೆಯ ವ್ಯಾಖ್ಯಾನವೂ ಇಲ್ಲ. ತಾವೇನೋ ಸಮಾಜೋದ್ಧಾರಕಕ್ಕಾಗಿ ಈ ರೀತಿ ಕುಲ ಬಿಟ್ಟು ಲಗ್ನವಾದೆ ಎಂಬ ಘೋಷಣೆಯನ್ನಂತೂ ಅವರು ಅಪ್ಪಿತಪ್ಪಿಯೂ ಮಾಡಹೋಗಿಲ್ಲ. ದಾರಿಯಲ್ಲಿ ಸ್ನೇಹಿತರೊಟ್ಟಿಗೆ ‘ಹೀಗೀಗೆ ಆಯ್ತು ಕಣ್ರೀ’ ಎಂದು ಹೇಳಿಕೊಳ್ಳುವಷ್ಟೇ ಮುಗ್ಧವಾಗಿ, ಸಹಜವಾಗಿ ತಮ್ಮ ಜೀವನಾನುಭವವನ್ನು ಹಂಚಿಕೊಂಡಿರುವುದರೊಟ್ಟಿಗೆ ಅತಿಯಾದ ಒಳ್ಳೆಯತನವನ್ನೂ ತೋರ್ಪಡಿಸಿಕೊಳ್ಳುತ್ತಾರೆ.

ಕ್ರಿಶ್ಚಿಯಾನಿಟಿಯಲ್ಲಿ ಗಾಢನಂಬಿಕೆಯುಳ್ಳ ಮಹಿಳೆಯೊಂದಿಗಿನ ಬದುಕು, ಶಿವಪಾರ್ವತಿಯರನ್ನು ಚಿತ್ರಿಸುವ ಕಲಾವಿದನ ಮನಸ್ಸು, ‘ಕೆಟಗೆರಿ‘ ಎಂದವರ ಬಗೆಗಿನ ಆಕ್ರೋಶ ಜೊತೆಗೆ ಕೊನೆಯಲ್ಲಿ ‘ಗಾಯತ್ರಿ ಮಂತ್ರ’ ಇದೆಲ್ಲ ಮೇಳೈಸಿದ ಪರಶಿವಮೂರ್ತಿಯವರ ವೈರುಧ್ಯತೆಗಳ ನಡುವೆಯೂ ಅವರ ಬರವಣಿಗೆಯ ನಿಸ್ಪೃಹತೆಯನ್ನು ಮೆಚ್ಚದೆ ಇರಲಾಗುವುದಿಲ್ಲ. ಅಸ್ತಿತೆಗಾಗಿ ಅವರು ನಡೆಸುವ ಹುಡುಕಾಟ ಮರಾಠಿ ದಲಿತ ಬರಹಗಾರ ಲಕ್ಷ್ಮಣರನ್ನು ನೆನಪಿಗೆ ತರುತ್ತದೆ- ಅನುಭವ, ಕೌಟುಂಬಿಕ ಹಿನ್ನಲೆ ಸಂಪೂರ್ಣ ಭಿನ್ನವಾಗಿದ್ದರೂ ಕೂಡ!

‘ಉಚಲ್ಯಾ’ ಹೆಸರಿನ ಲಕ್ಷ್ಮಣರ ಆತ್ಮಕಥನ ಮರಾಠಿಯಲ್ಲಿ ಪ್ರಕಟವಾದಾಗ ಸಾಹಿತ್ಯಕ ಲೋಕದಲ್ಲಿ ಅಲ್ಲೋಲಕಲ್ಲೋಲವೇ ಸೃಷ್ಟಿಯಾಗಿತ್ತು. ಅದು ಕೇವಲ ಆತ್ಮಚರಿತ್ರೆಯಲ್ಲ, ಅವಮಾನಗಳ ದಾಖಲೆ, ಮಹಾರಾಷ್ಟ್ರದ ಜಾತಿವ್ಯವಸ್ಥೆಯ ಅತಿ ಕೆಳಸ್ತರದ ದಲಿತ ಜನಾಂಗದ ಈ ಆತ್ಮಕಥನ ಎಷ್ಟು ಮನ ಕುಲುಕುವಂತಿದೆಯೆಂದರೆ- ಈ ಲೇಖಕ ಒಂದೆಡೆ ತಮ್ಮ ಬಾಲ್ಯವನ್ನು ಹೀಗೆ ಚಿತ್ರಿಸಿಕೊಂಡಿರುವುದನ್ನೇ ನೋಡಿ- ‘ನಾವೆಲ್ಲಾ ಹುಡುಗರು ಮಲವಿಸರ್ಜನೆಗೆ ಕುಳಿತಾಗ ಹಂದಿಗಳು ಅದನ್ನು ತಿನ್ನಲು ಮುಕುರಿಕೊಳ್ಳುತ್ತಿದ್ದವು. ಆದರಿಂದ ನಮಗೆ ಸಂತೋಷವೇ ಆಗುತ್ತಿತ್ತು. ಅವು ಚೆನ್ನಾಗಿ ತಿಂದು ಕೊಬ್ಬಿದರೆ ತಾನೆ ನಮಗೆ ಒಳ್ಳೆ ಹಂದಿಯ ಮಾಂಸ ತಿನ್ನಲು ದೊರೆಯುವುದು? ನಮ್ಮ ಜನ ಕಳ್ಳತನ ಮಾಡಲೇಬೇಕಿತ್ತು. ಅತಿ ಬಡತನ ಮತ್ತು ನಿರುದ್ಯೋಗದಿಂದ ತಿನ್ನಲು ಇನ್ನೇನೂ ಇಲ್ಲ ಎಂಬ ಪರಿಸ್ಥಿತಿಯಲ್ಲಿ ಕದಿಯುವುದು ಅನಿವಾರ್ಯ ತಾನೆ? ಹಾಗಾಗಿ ಊರಿನಲ್ಲಿ ಯಾರು, ಏನೇ ಕದ್ದರೂ ಪೋಲೀಸರು ಮೊದಲು ನಮ್ಮವರನ್ನು ಎಳೆದೊಯ್ದು ಬಡಿಯುತ್ತಿದ್ದರು...’ ಹೀಗೆ ಪುಸ್ತಕದುದ್ದಕ್ಕೂ ಇಂಥ ದಾರುಣ ಅವಮಾನಗಳ ಸರಮಾಲೆಗಳನ್ನೇ ದಾಖಲಿಸುತ್ತಾ ಹೋಗುತ್ತಾರೆ.

ಈ ಎರಡೂ ಪುಸ್ತಕಗಳನ್ನು ತುಲನಾತ್ಮಕ ಅಧ್ಯಯನಕ್ಕೊಳಪಡಿಸುವುದು ನನ್ನ ಉದ್ದೇಶ ಖಂಡಿತ ಇಲ್ಲ. ಆದರೆ ಬರವಣಿಗೆ ಹೇಗೆ ಅವಮಾನಗಳನ್ನು ದಾಖಲಿಸಲು ನೆರವಾಗುತ್ತದೆ ಮತ್ತು ತನ್ಮೂಲಕ ವ್ಯಕ್ತಿ ನಿರುಮ್ಮಳತೆಯನ್ನು ಹೊಂದಲು ಅನುವು ಮಾಡಿಕೊಡುತ್ತದೆ ಎಂಬ ಸೋಜಿಗ ಮಾತ್ರದಿಂದ ‘ಉಚಲ್ಯಾ’ ನೆನಪಾಗುತ್ತದೆ.

‘ಗೆರೆ ದಾಟಿದಮೇಲೆ’ಯಲ್ಲಿಯೂ ಸಾಕಷ್ಟು ಅವಮಾನಗಳನ್ನು ಪರಶಿವಮೂರ್ತಿ ದಾಖಲಿಸಿದ್ದಾರೆ.
ಅವರು ಮದುವೆಯಾಗಬಯಸಿ, ಐರೀನ್‍ರೊಂದಿಗೆ ಸಬ್ ರಿಜಿಸ್ಟ್ರಾರ್ ಆಫೀಸಿಗೆ ಬಂದಾಗ, ಅಲ್ಲಿನ ಅಧಿಕಾರಿ, ‘ಏನೋ ಚೋಟುದ್ದ ಇದ್ದೀಯಾ, ಮದುವೆಯಾಗ್ಬೇಕಾ? ನಿಮಗೆ ಹೇಳೋರು ಕೇಳೋರು ಯಾರೂ ಇಲ್ವಾ? ನಡಿ ಇಲ್ಲಿಂದ’ ಎಂದು ಬೈದು ಕಳುಹಿಸುವುದು, ಅಪ್ಪ ಸೈಟೊಂದನ್ನು ಎರಡು ಸಾವಿರಕ್ಕೆ ಮಾರಿದ್ದೀಯೆಂದು ಬರೆಸಿಕೊಂಡು, ಹಣ ಕೊಡದೆ ಆಟೋಚಾರ್ಜಿಗೆ ಒಂದೆರಡು ರುಪಾಯಿ ಕೊಡುವುದು, ಹೆರಿಗೆಗೆಂದು ಆಸ್ಪತ್ರೆಯ ಒಳಗಿರುವ ಹೆಂಡತಿಗೆ ಹೆರಿಗೆಯಾಯ್ತಾ ಎಂದು ಕೇಳಿ ಆಸ್ಪತ್ರೆಯ ಆಯಾ ಬಳಿ ‘ಸುಮ್ನೆ ಇರಯ್ಯಾ. ಆದಾಗ ತಿಳಿಸ್ತೇವೆ’ ಎನಿಸಿಕೊಳ್ಳುವುದು, ಹೀಗೆ...

ಇಂಥ ಸಂದರ್ಭಗಳಲ್ಲಿ ಪರಶಿವಮೂರ್ತಿ ‘ನಾನೇನು ತಪ್ಪು ಮಾಡಿದೆ?’ ಎಂದು ಕೇಳಿಕೊಂಡು ಕಂಬನಿ ಮಿಡಿಯುತ್ತಾರೆ ಮತ್ತು ಒಂದು ನಿರ್ಧಾರಕ್ಕೆ ಬರುತ್ತಾರೆ ಕೂಡಾ.. ಯಾವ ನೆಲೆಗಟ್ಟಿನಲ್ಲೇ ಆಗಲಿ, ಯಾರಿಗೆ ಬೇಕಿರಲಿ, ಬೇಡದಿರಲಿ ಸಂಭವಿಸಿಬಿಡುವ ಪರಿ ಅಚ್ಚರಿ ಹುಟ್ಟಿಸುತ್ತದೆ.

ಅಪಮಾನಗಳ ಪರಿಭಾಷೆ ಕಾಲಾಂತರದಲ್ಲಿ ರೂಪ ಬದಲಾವಣೆಗೊಂಡಿದೆ. ಜೊತೆಗೆ ಅದನ್ನು ಹೇಳಿಕೊಳ್ಳಲೇಬೇಕಾದ ವ್ಯಕ್ತಿಯ ತುರ್ತು ಇಲ್ಲಿ ವಿಭಿನ್ನವಾಗಿ ವ್ಯಕ್ತವಾಗುತ್ತದೆ. ದಲಿತತನ ಕೂಡಾ ನೆನಪಿಟ್ಟುಕೊಳ್ಳಲೇಬೇಕಾದ ಅನಿವಾರ್ಯತೆಯಾಗಿಯೇನೂ ಉಳಿದಿಲ್ಲ ಎಂಬುದೂ ಸ್ವಾಗತಾರ್ಹ. ಆದರೆ ಆನಂದದ ಸಂಗತಿಯೆಂದರೆ ಲಕ್ಷ್ಮಣ ಅನುಭವಿಸಿದ ದಲಿತತನ ವಿಕೃತಿಗಳನ್ನು ಪರಶಿವಮೂರ್ತಿ ಹೊರಗು ಮಾಡಿಕೊಂಡರು ಎಂಬುದು.

ಅವರು ತಮ್ಮ ಬಾಲ್ಯವನ್ನು ಹೀಗೆ ಹೇಳುತ್ತಾರೆ- ‘ಸ್ಕೂಲಿನ ಬ್ರಾಹ್ಮಣ ಗೆಳೆಯರ ಜತೆ ಸೇರಿ ಒಂದು ಕಡೆ ಒಳ್ಳೆಯ ಸಂಸ್ಕಾರಗಳನ್ನು ಕಲಿಯುತ್ತಿದ್ದರೆ, ಇನ್ನೊಂದುಕಡೆ ನಮ್ಮ ಕೇರಿಯ ಗೆಳೆಯರ ಜೊತೆ ಸೇರಿ ನಮ್ಮತನವನ್ನು ಉಳಿಸಿಕೊಳ್ಳುತ್ತಿದ್ದೆ...’
ಎರಡು ದಲಿತ ಬಾಲ್ಯಗಳ ನಡುವಿನ ವ್ಯತ್ಯಾಸಕ್ಕೆ ಆರ್ಥಿಕ ಪರಿಸ್ಥಿತಿಯೇ ಕಾರಣ ಎಂದು ಮತ್ತೆ ಹೇಳಬೇಕಾಗಿಲ್ಲ.

ಗೊತ್ತಿದ್ದೋ ಗೊತ್ತಿಲ್ಲದೆಯೋ ಪರಶಿವಮೂರ್ತಿ ತಮ್ಮ ಗೆಳೆಯರು, ಬಂಧುಗಳನ್ನೆಲ್ಲಾ ಓದುಗರಿಗೆ ಪರಿಚಯಿಸುವುದಕ್ಕಾಗಿಯೇ ಸಾಕಷ್ಟು ಪುಟಗಳನ್ನು ಮೀಸಲಿಟ್ಟಿರುವುದು ಗಮನಿಸತಕ್ಕ ವಿಚಾರ. ಅವರ ವಿದ್ಯೆ ಮತ್ತು ಉದ್ಯೋಗಗಳ ಮೂಲಕ ಆರ್ಥಿಕ ಸಬಲತೆಯನ್ನು ವರ್ಣಿಸುವಲ್ಲಿ ಅವರು ಹೆಮ್ಮೆಯ ಜೊತೆಗೆ ಮಾನಸಿಕ ಆಸರೆಯನ್ನು ಕಂಡುಕೊಂಡಿರುವುದರ ಜೊತೆಗೆ ಸಮುದಾಯ ಪ್ರಜ್ಞೆ ಕೂಡ ಎನ್ನಬಹುದೇನೋ...!

ಜೊತೆಗೆ ತೆರೇಸ ಆಂಟಿಯೊಂದಿಗೆ ಸೇಂಟ್ ಫಿಲೋಮಿನ ಚರ್ಚಿಗೂ ಹೋಗಿದ್ದನ್ನು ಬರೆಯುವಲ್ಲಿ ಅವರ ಜೀವನೋತ್ಸಾಹ ವ್ಯಕ್ತವಾಗುವುದು, ಬಾಲ್ಯದಲ್ಲೇ ಜಾತ್ಯಾತೀತ ವಾತಾವರಣಕ್ಕೆ ಪಕ್ಕಾಗಿದ್ದುದು ಅವರ ಸುದೈವವೆನ್ನಬೇಕು. ಆದರೆ ಅವಮಾನಗಳನ್ನು ಎದುರಿಸುವಲ್ಲಿ ಅವರೆಲ್ಲೂ ರಾಜಿಯಾಗಿಲ್ಲ. ಅವರ ಕಿರಿಯ ಮಗಳು ಇಂಜಿನಿಯರಿಂಗ್ ಕಾಲೇಜಿನಲ್ಲಿ ಸರಿಯುತ್ತರ ಹೇಳಲಾಗದೆ ತೊದಲಿದಾಗ ಉಪನ್ಯಾಸಕ ‘ಕೆಟಗರಿಯಲ್ಲಿ ಬಂದುಬಿಡುತ್ತೀರಿ’ ಎಂದು ಹಂಗಿಸಿದ್ದಕ್ಕೆ ಆಕೆ ಕಾಲೇಜನ್ನೇ ತೊರೆಯುವಾಗ ಪರಶಿವಮೂರ್ತಿಯವರು ಸಂಪೂರ್ಣ ಆಧ್ಯಾತ್ಮಿಕದತ್ತ ವಾಲುವುದು ಕೂಡ ಕುತೂಹಲ ಹುಟ್ಟಿಸುತ್ತದೆ. ಆದರೆ ಹಾಗೆಂದವನ ವಿರುದ್ಧ ಕಂಪ್ಲೇಂಟ್ ಕೊಡಲು ತಕ್ಷಣ ಸಿದ್ಧವಾಗುತ್ತಾರೆ.
ದಲಿತಾನುಭವದ ವಿಕಾರಗಳು ಆಧುನಿಕ ಶಿಕ್ಷಿತ ಪ್ರಪಂಚದಲ್ಲಿ ಹೊಸರೂಪ ಪಡೆದುಕೊಂಡಿರುವುದಕ್ಕೆ ಉದಾಹರಣೆಯನ್ನು ಈ ಘಟನೆ ಒದಗಿಸುತ್ತದೆ. ಸುಸಂಸ್ಕೃತ ದಲಿತನೊಬ್ಬ ಕಾನೂನುಬದ್ಧ ರೀತಿಯಲ್ಲಿ ಪ್ರತಿಭಟನೆಗೆ ಸಿದ್ಧವಾಗುವುದನ್ನೂ, ಆದರೆ ಅದಕ್ಕೂ ಮುಂದಿನ ತಲೆಮಾರಿನ ಅವರ ಮಗಳು ಸಾರಾಸಗಟಾಗಿ ತಿರಸ್ಕರಿಬಿಡುವ ಮತ್ತು ದಾರಿಯನ್ನೇ ಬದಲಿಸಿಬಿಡುವ ನಿರ್ಧಾರ ತೆಗೆದುಕೊಳ್ಳುವುದು ಆಧುನಿಕತೆ ಸೃಷ್ಟಿಸಿರುವ ವಿಫುಲ ಆಯ್ಕೆಗಳಿಗೆ ಸಂಕೇತವಾಗಿ ಒದಗುತ್ತದೆ.

ಇಡೀ ಆತ್ಮಕಥನದಲ್ಲಿ ತುಂಬಾ ಆಪ್ತವಾಗುವ ಅಧ್ಯಾಯಗಳೆಂದರೆ- ‘ಕಂದಾ... ಕ್ಷಮಿಸಿಬಿಡು ನನ್ನ’ ಮತ್ತು ‘ನಿಮ್ಮ ಮನೆಯಲ್ಲಿ ಯಾವ ದೇವರನ್ನು ಪೂಜಿಸುತ್ತೀರಿ?’
ಒಂದು ಅತ್ಯಂತ ವ್ಯಕ್ತಿಗತವಾದ ತಂದೆತನದ ನೋವಿನ ಅನುಭವವಾದರೆ ಮತ್ತೊಂದು ಪ್ರಭುದ್ಧ ಚಿಂತಕನೋರ್ವನ ವಿಚಾರಶೀಲ ಅನಿಸಿಕೆಗಳು.

ಚೊಚ್ಚಲ ಮಗುವಿನ ಬಗೆಗೆ ಅನಂತ ಆಶೆಗಳನ್ನಿಟುಕೊಂಡಿರುವ ಪತ್ನಿಗೆ ದಿನಗಳೇ ಉರುಳಿದರೂ ಹೆರಿಗೆಯಾಗದಿದ್ದಾಗ ಪುರುಷ ಪ್ರಜ್ಞೆಯ ಆಲೋಚನೆಗಳನ್ನು, ಹೊರಗಿನಿಂದ ನಿಂತುನೋಡುವಾಗ ಆಗುವ ಆತುರ, ಆತಂಕಗಳು, ಗೊಂದಲ, ಏನೂ ಅರ್ಥವಾಗದ ಚಿಕ್ಕವಯಸಿನ ಆಯೋಮಯ ಮನಸ್ಥಿತಿಯನ್ನು ವರ್ಣಿಸಿಕೊಳ್ಳುವಾಗ- ಓದುಗರನ್ನು ಅಳಿಸಬಲ್ಲ ಯೋಗ್ಯತೆ, ಸಾಮರ್ಥ್ಯ ಪರಶಿವಮೂರ್ತಿಗಳ ಅನುಭವ- ಅಭಿವ್ಯಕ್ತಿ ಎರಡಕ್ಕೂ ಇದೆ ಅನಿಸದಿರದು.

‘ಗೌರ್ನಮೆಂಟ್ ಬ್ರಾಹ್ಮಣ’ದ ವೈಚಾರಿಕ ಧುಮ್ಮುಕ್ಕುವಿಕೆಯಾಗಲೀ, ‘ಭಿತ್ತಿ’ಯ ಗೊಂದಲಮಯ ಆಶಯಗಳು ಮತ್ತು ಭಾಷಾಪ್ರೌಡಿಮೆಯಾಗಲೀ, ‘ಹುಳಿಮಾವಿನ ಮರ’ದ ಮಾಹಿತಿ ನಿಪುಣನ ಆತ್ಮವಿಶ್ವಾಸವಾಗಲೀ, ಇನ್ನೂ ಹೀಗೇ... ಹೆಸರಿಸಬಹುದಾದ ಯಾವ ಆತ್ಮಕಥನಗಳಿಗಿಂತಲೂ ವಿಭಿನ್ನವಾದದ್ದನ್ನು ಆರಂಭದಲೇ ಹೇಳಲಾಗಿದೆ.
ಅದು ತಲೆಮಾರಿನ ಕತೆ.
ಬೇರಾರಿಗೂ ಮುಖ್ಯವೆನಿಸದ ಪೂರ್ವಿಕರ ಕತೆಯಿಂದಲೇ ಆರಂಬಿಸಿರುವ ಪರಶಿವಮೂರ್ತಿಗಳು ಅಲ್ಲಿಂದಲೇ ನನ್ನ ಜಾತಿ ತಿಳಿಯದು ಎಂಬ ಪ್ರಜ್ಞೆಯನ್ನು ಬೆಳೆಸಿಕೊಂಡಿರಲಿಕ್ಕೂ ಸಾಕು. ಹಾಗೆಂದು ಅವರು ಎಲ್ಲೂ ಹೇಳಿಕೊಂಡಿಲ್ಲ. ಆದರೆ ಅಂತಃಸತ್ವವೊಂದು ಅಲ್ಲಿಂದಲೇ ಕೆಲಸ ಮಾಡಿದಂತೆ ಖಂಡಿತ ಭಾಸವಾಗುತ್ತದೆ. ಸಂತೆಯಲ್ಲಿ ಸಿಕ್ಕ ಮಕ್ಕಳನ್ನೇ ತನ್ನ ಮಕ್ಕಳೆಂದು ತಿಳಿದು ಸಲಹುವ ಸಂತಾನಹೀನ ದಂಪತಿಗಳು ಈ ಮರಿಮೊಮ್ಮಗನ ಲೇಖನಿ ಚಳಕದ ಮೂಲಕ ಹೀರೋ- ಹೀರೋಯಿನ್ ಗಳಂತೆ ಶೋಭಿಸುವುದು ಕಚಗುಳಿಯಿಡುತ್ತದೆ.

ಅಲ್ಲಿಂದ ಆರಂಭವಾಗುವ ಪೂರ್ವಿಕಪ್ರಜ್ಞೆ- ಅನಿವಾರ್ಯವಾಗಿ ಜಾತಿ ವಿಷಯದಲ್ಲಿ ಸುಳ್ಳೂ ಹೇಳಬೇಕಾದ ಸಂದರ್ಭದಲ್ಲಿ - ಆ ಪೂರ್ವಿಕರೆಂದು ನಂಬಲಾದ ಜಾತಿಯನ್ನು ಮುಲಾಜಿಲ್ಲದೆ ಹೇಳಿಕೊಳ್ಳುವುದು ಹಕ್ಕಿನ ಚಲಾವಣೆಯಾದಂತೆ ಎಂದು ಲೇಖಕನ ತಂದೆ ಮನಃಪೂರ್ವಕ ನಂಬುವುದು- ಓದುಗರಲ್ಲಿ ನಗೆಯುಕ್ಕಿಸುವುದರ ಜೊತೆಗೆ ಚಿಂತನೆಗೀಡುಮಾಡುವಂಥವು.

ಇಂಥ ಪ್ರಸಂಗಗಳಲ್ಲಿ ಪರಶಿವಮೂರ್ತಿಗಳು ಸಹೃದರನ್ನು ‘ಹೌದಲ್ಲ!’ ಎಂದು ಕೇಳಿಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಅಪ್ಪ-ಅಮ್ಮಂದಿರ ಬಾಂಧವ್ಯದ ಬಗೆಯಂತೂ ಲೇಖಕರದು ತುಂಬಾ ಭಾವುಕತೆ. ಆದರೆ ಅವರು ಅಪ್ಪಅಮ್ಮನ ಮಾತು ಕೇಳಿರುವುದು ಕಡಿಮೆಯೆಂದೇ ತೋರುತ್ತದೆ. ಅದು ಶಮ್ಮಿಕಪೂರನ ಸಿನೆಮಾದಿಂದ ಹಿಡಿದು ಮದುವೆಯವರೆಗೂ..! ಆದರೆ ಅವರು ಸಂಬಂಧಗಳ ಎಳೆಗಳನ್ನು ಕುರಿತು ಸದಾ ಧ್ಯಾನಿಸಿದ್ದಾರೆ. ತಾನು ಮಾಡಿದ್ದು ಸರಿಯೆ? ತಪ್ಪೆ? ಅಮ್ಮ ಏನೆಂದುಕೊಂಡಳೋ? ಎಂದು ಪ್ರತಿಕ್ಷಣ ಪ್ರಶ್ನಿಸಿಕೊಂಡಿದ್ದಾರೆ. ಮತ್ತೆ ಬಹುಶಃ ಚೆನ್ನಾಗಿ, ಒಳ್ಳೆಯವರಾಗಿ ಬದುಕುವುದರ ಮೂಲಕ ಅವರ ಋಣ ತೀರಿಸಿಕೊಳ್ಳಬಯಸಿರಬಹುದು.

ಮಿತಿಗಳೇನಿದ್ದರೂ ಅವನ್ನು ಮೀರುವ ಪ್ರಯತ್ನವನ್ನು ಲೇಖಕ ಪ್ರಾಮಾಣಿಕವಾಗಿ ಹೇಳುವುದರ ಮೂಲಕ ಹೊಸ ತಲೆಮಾರಿಗೆ ಒಳ್ಳೆಯದೊಂದು ಓದಿನ ಉಡುಗೋರೆ ಕೊಟ್ಟಿದ್ದಾರೆ.

ಸುಧಾ ಚಿದಾನಂದಗೌಡ.
(9-9-2010)