Sri. Raju M Badakappanavar,
K.Mallur, Savanur taluk, Haveri District.


... ವರ್ಷದ ಹಿಂದೆ ಅಲೆಕ್ಸ್ ಹೇಲಿಯ "ರ‍ೂಟ್ಸ್" (ಕನ್ನಡಾನುವಾದ ತಲೆಮಾರು- ಬಂ.ಜಯಪ್ರಕಾಶ್) ಕಾದಂಬರಿಯನ್ನು ಓದಿ ಮುಗಿಸಿದ್ದೆ. ನಿಮ್ಮ ಆತ್ಮಕಥೆಯ ಆರಂಭಿಕ ಕಥನ "ರೂಟ್ಸ್" ನ ಆರಂಭಿಕತೆಯನ್ನು ನೆನಪಿಸಿತು. "ಕರಿಯರ ಬೈಬಲ್" ಎಂದೇ ಪರಿಗಣಿಸಲ್ಪಟ್ಟಿರುವ ಆ ಕಾದಂಬರಿ ನನ್ನ ಚಿಂತನಾಶೀಲತೆಯನ್ನು ಮತ್ತಷ್ಟು ವಿಸ್ತರಿಸಿತ್ತು. ಕನ್ನಡ ಸಾಹಿತ್ಯ ಲೋಕದಲ್ಲಿ ನಾನು ಓದಿದ ಮೊದಲ ಆತ್ಮಕಥೆಯೆಂದರೆ ದಲಿತ ಕವಿ ಸಿದ್ದಲಿಂಗಯ್ಯನವರ "ಊರು ಕೇರಿ". ಸಾಕಷ್ಟು ಅನುಭವಗಳನ್ನು ಸೀಮಿತವಾಗಿ,ಚಿಕ್ಕದಾಗಿ ಅಲ್ಲಿ ಬರೆಯಲಾಗಿದೆ.ಮೂಲತಃ ಕವಿಯಾಗಿರುವುದರಿಂದ ಅವರಿಗೆ ಅಷ್ಟನ್ನೇ ನೀಡಲು ಸಾಧ್ಯವಾಗಿರಬಹುದು.

ಡಾ.ಕೃಷ್ಣಮೂರ್ತಿ ಹನೂರು ಅವರ ಮುನ್ನುಡಿಯದ್ದೇ ಒಂದು ತೂಕ ಬಿಡಿ. "ಸಮಾಧಾನ ಚಿತ್ತದಿಂದ ತಮ್ಮ ವಿವೇಕ, ಅವಿವೇಕಗಳನ್ನು ಓರೆಗೊಡ್ಡಿ ನೋಡಿಕೊಳ್ಳುತ್ತಾರೆ" ಎಂಬ ಮಾತುಗಳು ಓದುಗನಿಗೆ ಲೇಖಕನ ಮನಃಸ್ಥಿತಿಯ ಕುರಿತು ಚಿಕ್ಕದಾಗಿ ಒಂದು ಕಲ್ಪನೆ ಕಟ್ಟಿಕೊಡುತ್ತವೆ.

ನಾನೂ ಚಿಕ್ಕಂದಿನಲ್ಲಿಯೇ ಶ್ರೇಷ್ಠ ಬರಹಗಾರರು ಮತ್ತು ಲೇಖನಗಳ ವ್ಯಸನಿಯಾಗಿದ್ದೆ. ಯಂಡಮೂರಿ ವೀರೇಂದ್ರನಾಥ, ಪಿ. ಲಂಕೇಶ್, ಗಿರೀಶ್ ಕಾರ್ನಾಡ್ (ನಾಟಕಗಳು), ರವಿ ಬೆಳೆಗೆರೆ, ವಿಶ್ವೇಶ್ವರ ಭಟ್, ಖುಶ್ವಂತ್ ಸಿಂಗ್, ಓಶೋ, ಚಂದ್ರಶೇಖರ ಮಾಟೀಲ, ವೈಕಂ ಮಹಮದ್ ಮುಂತಾದವರು. ನಾನಿಂದಿಗೂ ಸೆಲೆಕ್ಟೆಡ್ ಪುಸ್ತಕ ಮತ್ತು ಬರಹಗಾರರನ್ನೇ ಓದೋದು. ಅಂದು ಸುಧಾದಲ್ಲಿ ನನ್ನ ಗಮನ ಸೆಳೆದಿದ್ದು ನಿಮ್ಮ ಪುಸ್ತಕದ ಮುಖಚಿತ್ರ. ಅದು "ಚೆಗ್ವಾರಾ" ಎಂಬ ಕ್ರಾಂತಿಕಾರಿಯನ್ನು ಹೋಲುತ್ತಿತ್ತು. (ನೀವೂ ಮಾಡಿದ್ದು ಪ್ರೇಮ ಕ್ರಾಂತಿ ಅಲ್ಲವೇ).

ನಿಮ್ಮ ಆರಂಭದ ಸಾಲುಗಳು ಒಬ್ಬ ಸಮರ್ಥ ಕಾದಂಬರಿಕಾರನನ್ನು ನೆನಪಿಸಿದವು. ಈ ಸಂದರ್ಭದಲ್ಲಿ ನಾನು ಹೇಳಬೇಕೆಂದರೆ ನೀವು ನಿಮ್ಮಲ್ಲಿನ ಬರಹಗಾರನನ್ನು ಪುಷ್ಠೀಕರಿಸದೇ ಉತ್ತಮ ಕಾದಂಬರಿಕಾರನನ್ನು ತೆರೆಮರೆಗೆ ಇಟ್ಟಿದ್ದಿರಿ. ಇನ್ನು ಮುಂದೆಯೂ ಬರೆಯಬಹುದೇನೋ.. ಸಿಡ್ನಿ ಶೆಲ್ಟನ್ ಬರೆಯಲು ಶುರುಮಾಡಿದ್ದೇ ಐವತ್ತರ ಆಸುಪಾಸುನಲ್ಲಿ.

"ಬೆನ್ಬಿಡದೆ ಕಾದಿರಲು ಬೇಗುದಿಯು ಹಿಂದೆ, ತಬ್ಬಲಿಯಾದೆನೆಗೆ ಗತಿಯಾರು ಮುಂದೆ". ನೀವೇ ಹೇಳಿ ನಿಮ್ಮ ಕವನದ ಸಾಲುಗಳಲ್ಲಿ ಕವಿಯೊಬ್ಬನಿಗಿರಬೇಕಾದ ಪದಲಾಲಿತ್ಯ, ಭಾವಸಾಮರ್ಥ್ಯ ಇಲ್ಲವೇ? ನಿಜಕ್ಕೂ ನಿಮ್ಮ ಕವನ ಓದುತ್ತಿದ್ದಂತೆ ನನಗೆ ನಿಮ್ಮ ಮನಸ್ಸಿನ ನೂರಾರು ಪಾತ್ರಗಳ ಕುರಿತು ಅಚ್ಚರಿ ಆಯಿತು. ಚೆಂದಗೆ, ಚಿಂತನೆಗೆ ಹಚ್ಚಿಬಿಡುವಂತೆ ಚಿತ್ರ ರಚಿಸಬಲ್ಲಿರಿ. ಬರಹಗಳಲ್ಲಿ ವೈಚಾರಿಕತೆಯನ್ನು ತುಂಬಿ ಬದುಕೆಂದರೆ ಇನ್ನೂ ಇದೆ ಎಂಬ ಪರಿಕಲ್ಪನೆ ಮೂಡಿಸಬಲ್ಲಿರಿ. ಎಲ್ಲವನ್ನೂ ಆಳವಾಗಿ ವಿಶ್ಲೇಷಿಸಿ, ಕೊನೆಯಲ್ಲಿ ಒಂದು ಸಂದೇಶ ಕೊಟ್ಟು ಚಿಂತನೆಗೆ ಹಚ್ಚಬಲ್ಲಿರಿ. ಒಬ್ಬ ಮನೋವಿಜ್ಞಾನ ವಿಷಯದ ವಿದ್ಯಾರ್ಥಿಯಾಗಿರುವುದೂ ಇದಕ್ಕೆಲ್ಲಾ ಕಾರಣ ಇರಬಹುದು.

ಬಾಂಬೆಯ ಕುರಿತಾದ ನಿಮ್ಮ ವರ್ಣನೆ, ಅಲ್ಲಿ ನಿಮಗೆದುರಾದ ಸಂದಿಗ್ಧತೆಯನ್ನು ತುಂಬಾ ಆಪ್ತವಾಗಿ ಕಟ್ಟಿಕೊಟ್ಟಿದ್ದೀರಿ. ನಿಮ್ಮ ಡೈಲಾಗ್ ಗಳು ನಿಜಕ್ಕೂ ಶಕ್ತಿಶಾಲಿ. ಇಷ್ಟನ್ನು ಮಾತ್ರ ಹೇಳಬಲ್ಲೆ. ನಿಮ್ಮೊಳಗೆ ಒಬ್ಬ ಬರಹಗಾರ ತಹತಹಿಸುತ್ತಿದ್ದಾನೆ. ಆತನನ್ನು ದಣಿಸಿ. ಭುವನೇಶ್ವರಿ ದೇವಿಗೆ ಒಂಚೂರಾದರೂ ಸೇವೆ ಸಲ್ಲಿಸಲಿ.
ನಿಮ್ಮ ಮುಂದಿನ ಕೃತಿಯ ನಿರೀಕ್ಷೆಯಲ್ಲಿ

ನಿಮ್ಮ ಆತ್ಮೀಯ
ರಾಜು
(ತಾರೀಖು: ೨೧-೬-೨೦೧೦)


(ರಾಜು ಎಂ. ಬದಕ್ಕಪ್ಪನವರ್, ಕೆ.ಮಲ್ಲೂರ್, ಸವಣೂರ್ ತಾಲ್ಲೂಕ್, ಹಾವೇರಿ ಜಿಲ್ಲೆ.)