Dr. Jayaprakasha Mavinakuli,
Principal, Shree Bhuvanendra Collej, Karkala- 574104 Udupi District.


ಎಂ.ಎಸ್.ಪರಶಿವಮೂರ್ತಿ ಅವರ ಅದ್ಭುತ ಆತ್ಮಕಥನ ‘ಗೆರೆ ದಾಟಿದ ಮೇಲೆ’

ಪ್ರಿಯ ಪರಶಿವಮೂರ್ತಿ,
ನಿನ್ನ ಪ್ರಥಮ ಕೃತಿ- ಆತ್ಮಕಥನ- ‘ಗೆರೆ ದಾಟಿದ ಮೇಲೆ’- ದ ೪೨೪ ಪುಟಗಳನ್ನು ತುಂಬಾ ಆಸ್ಥೆಯಿಂದ ಓದಿದೆ. ಇಷ್ಟು ಆಸ್ಥೆ ವಹಿಸಲು ಎರಡು ಮುಖ್ಯ ಕಾರಣಗಳು- ನನ್ನ ಪ್ರೀತಿಯ ಸಹಪಾಠಿ ನೀನು ಎಂದು ಮತ್ತು ನೀನು ಮೈಸೂರಿನ ಬಗ್ಗೆ ಬರೆದಿರುತ್ತೀಯಾ ಎಂದು.

ಆತ್ಮಕಥನ ಬರೆಯುವುದಕ್ಕೆ ಭಾರತೀಯ ಪರಂಪರೆಯಲ್ಲಿ ಒಂದು ವಿಶಿಷ್ಟವಾದ ಸ್ಥಾನಮಾನವಿದೆ. ಆರಂಭದಲ್ಲಿ ಆತ್ಮಕಥನ ಬರೆಯುವವರು ತುಬಾ ಖ್ಯಾತರಾದವರು ಮಾತ್ರ ಇದ್ದರು. ನಂತರ ಬಹಳ ಮುಖ್ಯವಾಗಿ ಮರಾಠಿಯಲ್ಲಿ ತೀರಾ ಸಾಮಾನ್ಯರು ಬರೆಯತೊಡಗಿದರು. ಅವರಿಗೂ ಆತ್ಮ ಇದೆಯಲ್ಲ! ದೊಡ್ಡವರಿಗೆ ಮಾತ್ರ ಆತ್ಮ ಇರುವುದಿಲ್ಲವಷ್ಟೆ.

ಆದರೂ ಆತ್ಮಕಥನ ಬರೆಯುವವರು ಉಳಿದ ಪ್ರಾಕಾರಗಳಿಗೆ ಹೋಲಿಸಿದರೆ ತೀರಾ ಕಡಿಮೆಯೇ. ಇದಕ್ಕೆ ಕಾರಣ ಪ್ರಾಮಾಣಿಕತೆಯ ಅಭಾವ. ತಮ್ಮ ದೌರ್ಬಲ್ಯಗಳನ್ನು ಹೇಳಿಕೊಳ್ಳಲಾಗದ ಗಿಲ್ಟ್. ಬರಿ ಅವರ ಬಗ್ಗೇನೇ ವೈಭವೀಕರಿಸಿದರೆ ಅದು ಹೊಗಳುಭಟರ ಎಂಜಲು ಶ್ಲೋಕವಾಗುತ್ತದೆ. ಆದುದರಿಂದ ಆತ್ಮಕಥನವೆಂದರೆ ಒಂದು ಬದುಕಿನ ಹಿನ್ನೋಟ. ಕಾಲ ಕ್ರಮಿಸಿದ ಅನೇಕ ದಾರಿಗಳ ತಿರುಗುನೋಟ ಇದೆ. ಜೀವನದಲ್ಲಿ ಎಷ್ಟೊಂದು ಗೆರೆಗಳನ್ನು ದಾಟಿ ಬದುಕಬೇಕು. ಗೆರೆ ದಾಟಲಾರದ ಭೀಮ ಕಾಯುತ್ತಿದ್ದಾನೆ (ಶಿವರುದ್ರಪ್ಪ).

ಆತ್ಮಕಥನದ ಸಂಖ್ಯೆ ಕಡಿಮೆಯಾಗಲು ಇನ್ನೊಂದು ಕಾರಣ- ಅನೇಕರ ಬದುಕಿನಲ್ಲಿ ಒಂದು ಸಂಘರ್ಷವೇ ಇಲ್ಲದಿರುವುದು. ಸಪ್ಪೆಯಾದ ಬದುಕಿಗೆ ಆತ್ಮ ಎಲ್ಲಿ ಇರುತ್ತದೆ ಹೇಳಿ. ಅನೇಕ ಸರ್ತಿ ತೀರ ಸವಾಲಿನ ಜೀವನ ನೋಡಿದವರಿಗೆ ಬರೆಯುವ ಕೌಶಲ ಇಲ್ಲ. ಮಾತಿನಲ್ಲಿಯೇ ಕಳೆದುಹೋಗುತ್ತದೆ. ದಾಖಲಾಗುವುದಿಲ್ಲ. ಆದರೆ ಹೀಗೆ ಅನುಭವ ಮತ್ತು ಬರೆಯುವ ಶಕ್ತಿ ಇರುವವರಲ್ಲಿ ನೀವೂ ಒಬ್ಬರು ಎಂಬುದು ನಿಮ್ಮ ಆತ್ಮಕಥನ ಓದಿದ ಯಾರಿಗಾದರೂ ಅರ್ಥವಾಗುತ್ತದೆ.

‘ಸಂತೆಯಲ್ಲಿ ಸಿಕ್ಕ ಮುತ್ತಜ್ಜ’ನಿಂದ ಆರಂಭವಾಗುವ ನಿಮ್ಮ ಆತ್ಮಕಥನ- ಕೇವಲ ನಿಮ್ಮ ಆತ್ಮಕಥನವಲ್ಲ. ನಿಮ್ಮ ಇಡೀ ವಂಶದ ದಾಖಲು ಅದು. ಮಂಡ್ಯದ ಧಾರಾಕಾರದ ಮಳೆಯಲ್ಲಿ ಸಂತೆಯ ದಿನ ಪುಟ್ಟವ್ವ ಮತ್ತು ಕುಂಡೇರಿಕಾಳಯ್ಯರಿಗೆ ಸಿಕ್ಕ ನಿಮ್ಮ ವಂಶದವರು- ಗೆಂಡೇಬೋರ ಮತ್ತು ಗೆಂಡೇಬೋರಿ. ಈ ಗೆಂಡೇಬೋರನ ಹಿರಿಯ ಮಗ ಹೊಟ್ಟೇಕಾಳಯ್ಯ, ಅವನ ಎರಡನೆಯ ಮಗ ಶಿವಯ್ಯ- ಅಂದರೆ ನಿಮ್ಮ ತಂದೆ.

ಈ ಆತ್ಮಕಥನದ ಆರಂಭವೇ ಒಂದು ಅದ್ಭುತ ರೋಮಾಂಚನಕಾರಿ ವ್ಯಾಖ್ಯಾನವಾಗಿದೆ. ಆರಂಭದಲ್ಲೇ ಕಾಣಸಿಗುವ ಹಳ್ಳಿಯವರ ಅಧಮ್ಯ ಪ್ರೀತಿ, ಪುಟ್ಟವ್ವನ ಮಕ್ಕಳ ಹಂಬಲ, “ಕಣ್ಣುಬಿಟ್ಟರೆ ಎಲ್ಲಿ ಬೇಗ ಬೆಳಕಾಗಿಬಿಡುವುದೋ ಎಂದು ಮರುಗಿದ ಪುಟ್ಟವ್ವ ಮಕ್ಕಳನ್ನು ಎದೆಗವುಚಿ ಒಳಗೊಳಗೇ ಜೋಗುಳವನ್ನು ಗುನುಗಿಕೊಳ್ಳುತ್ತಾ ರಾತ್ರಿಯಿಡೀ ಎಚ್ಚರವಾಗೇ ಇದ್ದಳು” ಎಂಬ ನಿಮ್ಮ ಅನಿಸಿಕೆ ತಾಯ್ತನದ ಹಂಬಲದ ಪರಾಕಾಷ್ಟೆಯನ್ನು ಹೇಳಿ ಹೃದಯವನ್ನು ತಲ್ಲಣಗೊಳಿಸುತ್ತದೆ. ಹೀಗೆ ಒಂದು ನೂರ ಎಪ್ಪತ್ತು ವರ್ಷಗಳ ಹಿಂದೆ ನಡೆದ ಘಟನೆಯ ಆಖ್ಯಾನ ಇದು. ಇದೇ ರೀತಿಯ ತಾಯ್ತನದ ಹಂಬಲವನ್ನು ನಿಮ್ಮ ಚೊಚ್ಚಲ ಹೆರಿಗೆಯ ಸಂದರ್ಭದಲ್ಲೂ ನೋಡಬಹುದು. ನಿಮ್ಮ ಪ್ರೀತಿಯ ಮಡದಿ ಹೇಳುತ್ತಾಳೆ- “ಅದೆಲ್ಲಾ ನನಗೆ ಗೊತ್ತಿಲ್ಲ. ನನ್ನ ಮಗುವಿನ ಮೇಲೆ ನನಗೆ ಆಗಲೇ ಪ್ರೀತಿ ಬಂದುಬಿಟ್ಟಿದೆ. ಹೊಟ್ಟೆಯೊಳಗಿಂದ ಅದು ‘ನನ್ನ ಸಾಯಿಸ್ತೀಯಂತೆ. ನಿಜಾನಾ ಮಮ್ಮಿ’ ಅಂತ ಕೇಳಿದ ಹಾಗೆ ಆಗುತ್ತೆ.. ನೋಡಿ ನೀವು ಖರ್ಚಿಗೆ ಏನೂ ಹೆದರಿಕೋಬೇಡಿ. ನಾನು ಹೇಗಾದ್ರೂ ಮಾಡಿ ಅರೆಹೊಟ್ಟೆಯಲ್ಲಿದ್ದಾದ್ರೂ ನನ್ನ ಮಗುವಿಗಾಗಿ ಹಣ ಉಳಿಸ್ತೀನಿ. ನಿಮಗೆ ಜಾಸ್ತಿ ಹೊರೆ ಆಗದ ಹಾಗೆ ನಾನು ನೋಡಿಕೊಳ್ತೀನಿ. ನೀವು ಅದಕ್ಕೆ ಹೊಸ ಬಟ್ಟೆ ಸಹಾ ಕೊಳ್ಳಬೇಡಿ. ನನ್ನ ಎದೆಯ ಹಾಲನ್ನು ಎಷ್ಟು ವರ್ಷ ಬೇಕಾದರೂ ಕೊಡ್ತೀನಿ..” ಎಂಬ ಮಾತು ಪುನಃ ಪುಟ್ಟವ್ವನ ಹೃದಾಂತರದ ಮಾತನ್ನು ನೆನಪಿಸುತ್ತವೆ. ಗರ್ಭ ತೆಗೆಸುವುದು ಗಂಡಸಿಗೆ ಒಂದು ಕ್ರಿಯೆ ಮಾತ್ರ. ಆದರೆ ತಾಯಿಗೆ ಅದು ಹೃದಯವನ್ನು ಕತ್ತರಿಸುವ ನೋವು.

ನಿಮ್ಮ ಆತ್ಮಕಥನ ತುಂಬಾ ವೈವಿಧ್ಯಮಯವಾಗಿದೆ. ನಿಮ್ಮಲ್ಲಿರುವ ಸ್ಥಾಯಿ ಗುಣ ಹೆಂಗರುಳು. ನೀವು ದುಃಖ ಕಂಡಾಗ ಅತ್ತುಬಿಡುತ್ತೀರಿ. ನೋವಿಗೆ ಸ್ಪಂಧಿಸದ ಯಾರೂ ಬರೆಯಲಾಗುವುದಿಲ್ಲ. ಹೀಗಾಗಿ ನೀವು ಅನೇಕ ಕಡೆ ಮುಜುಗರ ಬಿಟ್ಟುಅತ್ತಿದ್ದೀರಿ. ಮತ್ತು ನನ್ನ ಕಣ್ಣಲ್ಲೂ ನೀರು ತುಂಬಿಸಿದ್ದೀರಿ. ಯೇಸುಕ್ರಿಸ್ತನ ಫೋಟೋ ನೋಡಿ ನೀವು ಅಳುತ್ತೀರಿ. ಇಮ್ಮ ಕೈಗಳ ಮೇಲೆ ಎದೆಯ ಮೇಲೆಲ್ಲಾ ಇರುವ ಮಚ್ಚೆಗಳನ್ನು ಹುಲ್ಲುರಿಗಳನ್ನು ಮೊದಲ ಬಾರಿಗೆ ಅಂಜುತ್ತಾ ಬೇಬಿಗೆ ತೋರಿಸುವಾಗ ನಿಮ್ಮ ಕಂಗಳಿಂದ ನೀರು ತೊಟ್ಟಿಕ್ಕುತ್ತದೆ. ಬೇಬಿ ಮೆಜೆಸ್ಟಿಕ್ ತಲುಪುವವರೆಗೂ ಮಾತನಾಡದಿದ್ದರೆ ನಿಮಗೆ ಕಣ್ಣೀರು ಬರುತ್ತದೆ. ಕೊನೆಯದಾಗಿ ಕೇಳಲು ಬಂದ ಅಪ್ಪನ ಅಸಹಾಯಕತೆಯಿಂದ ಕಾಂಪೌಂಡ್ ಗೇಟನ್ನು ಸರಿಯಾಗಿ ಹಿಡಿದುಕೊಳ್ಳಲು ಹೆಣಗಾಡುತ್ತಿರುವಾಗ ನೀವು ಅವರನ್ನು ಅಪ್ಪಿ ಜೋರಾಗಿ ಅಳುತ್ತೀರಿ. ಪ್ಲೀಸ್... ಪ್ಲೀಸ್.. ಇದೇ ರೀತಿ ಎ.ಸಿ.ಎಫ಼್. ಸಾಹೇಬರು ಹಣ ನೀಡಿದಾಗ...

ಇಡೀ ಆತ್ಮಕಥೆಯನ್ನು ಒಂದು ಕಾದಂಬರಿಯಂತೆ ಬರೆದಿದ್ದೀರಿ. ಒಂದು ಸಣ್ಣ ಎಳೆಯಲ್ಲಿ ಇವಿಷ್ಟನ್ನು ಕಾದಂಬರಿ ಬಂಧದಲ್ಲಿ ಕಟ್ಟಿಬಿಟ್ಟಿದ್ದರೆ ಇದು ಒಂದು ಒಳ್ಳೆಯ ಕಾದಂಬರಿಯೇ... ತಲೆಮಾರುಗಳ ಕಾದಂಬರಿ. ಕಾದಂಬರಿಗೆ ಬೇಕಾದ ಅಥವಾ ಎಲ್ಲ ಸಾಹಿತ್ಯ ಕೃತಿಗಳಲ್ಲಿ (ಮುಖ್ಯವಾಗಿ ಗದ್ಯದಲ್ಲಿ) ಕಾಣುವ ಒಳವಿನ್ಯಾಸ (ಇನ್ತೆರ್ನಲ್ ದೆಚೊರತಿಒನ್) ತುಂಬಾ ಅಭೂತಪೂರ್ವವಾಗಿ ಮೂಡಿಬಂದಿದೆ. ಒಂದು ಪದಾರ್ಥದ ಸಿದ್ಧತೆಯನ್ನು ನೋಡಿ. “ಮಿರ್ರನೆ ಹೊಳೆಯುತ್ತಿದ್ದ ಹಿತ್ತಾಳೆಯ ತಣಿಗೆಗೆ ಮುದ್ದೆಯೊಂದನ್ನಿಟ್ಟುಕೊಂಡು, ಬೆಳಿಗ್ಗೆ ಎದ್ದು ಆಸುಪಾಸಿನಲ್ಲಿ ಬೆಳೆದಿದ್ದ ಬೆರೆಕೆ ಸೊಪ್ಪನ್ನು ತನ್ನ ಕೈಯ್ಯಾರ ಕಿತ್ತು ತಂದು ಮಾಡಿದ್ದ ಸೊಪ್ಪಿನ ಉಪ್ಪೆಸರನ್ನು ಸುರಿದುಕೊಂಡು ಕೆಂಡದ ಮೇಲೆ ಸುಟ್ಟ ಒಣಮೆಣಸಿನಕಾಯಿಯ ಜತೆಗೆ ಉಣಿಸೇಹಣ್ಣು ಉಪ್ಪು ಸೇರಿಸಿ ಅರೆದು ಘಮಘಮಿಸುತ್ತಿದ್ದ ಖಾರವನ್ನು ಕಲೆಸಿ..” ನೋಡಿ ಎಷ್ಟು ಸೂಕ್ಷ್ಮ ಅವಲೋಕನ. ಇದೇ ರೀತಿ ನೀವು ಕೆಂಪಣ್ಣನಿಗೆ ಕವನ ತೋರಿಸಲು ಹೋದಾಗ ಅವನಿದ್ದ ಸ್ಥಿತಿ: “ಅದೆಲ್ಲಿಂದಲೋ ತಂದಿದ್ದ ಒಣಹುಲ್ಲಿನಂತಿದ್ದ ಗಾಂಜಾವನ್ನು ತನ್ನ ಎಡ ಅಂಗೈ ಮೇಲೆ ಸುರಿದುಕೊಂಡು, ಅದಕ್ಕೆ ಒಂದಷ್ಟು ತೊಟ್ಟು ನೀರು ಹಾಕಿ, ಬಲಗೈ ಹೆಬ್ಬೆರಳಿಂದ ಚೆನ್ನಾಗಿ ಹೊಸೆದು, ದನಿಯಾ ಬೀಜದಂತಿದ್ದ ಬೀಜವನ್ನು ಹೆಕ್ಕಿ ಹೊರಗೆಸೆದು, ಮತ್ತೆ ತೀಡಿ ಗೋಲಿಯಾಕಾರ ಮಾಡಿಕೊಂಡು, ಅದನ್ನು ಹೆಬ್ಬೆರಳು ಗಾತ್ರದ ಮಣ್ಣಿನ ‘ಸೇದುಕೊಳವೆ’ಯ ಅಗಲದ ಮೇಲ್ಭಾಗಕ್ಕೆ ತುರುಕಿ ಅದುಮಿದ ನಂತರ, ಒದ್ದೆಬಟ್ಟೆ ಸುತ್ತಿದ್ದ ಅದರ ತಳಭಾಗವನ್ನು, ತನ್ನ ಬಲಗೈಯ ಕಿರುಬೆರಳು ಮತ್ತು ಉಂಗುರದ ಬೆರಳ ನಡುವೆ ಸಿಕ್ಕಿಸಿಕೊಂಡು ಬಲವಾಗಿ ಮುಷ್ಟಿ ಹಿಡಿದ ಹಸ್ತವನ್ನು ಕೊಳವೆಯನ್ನಾಗಿಸಿ ತುಟಿಗೆ ಒತ್ತಿ ಹಿಡಿದು, ಎಡಗೈಯಿಂದ ಹೊತ್ತಿಸಿದ ಬೆಂಕಿಕಡ್ಡಿಯ ಜ್ವಾಲೆಯನ್ನು ಗಾಂಜಾಕ್ಕೆ ಹಿಡಿದು, ‘ಊಫ಼್...”.. ಅದಕ್ಕಾಗಿಯೇ ಇರಬೇಕು ರವಿ ನೋಡದಿದ್ದುದನ್ನು ಕವಿ ನೋಡುತ್ತಾನೆ ಎಂಬ ಮಾತು ಪ್ರಚಲಿತವಾಗಿದ್ದು. ಇದು ಲೇಖಕನ ಗ್ರಹಿಕೆಯನ್ನು ತೋರಿಸುತ್ತದೆ. ಎಚ್ಚರವನ್ನು ಹೇಳುತ್ತದೆ.

ಸಮಾಜ ನಿಮ್ಮನ್ನು ಕಂಡು ಹೀನಾಯವಾಗಿ ನೋಡಿಕೊಂಡರೂ ನಿಮ್ಮ ಧ್ವನಿಯಲ್ಲಿ ಪ್ರತಿಭಟನೆ ಇಲ್ಲ. ಒಳಗೊಳಗೆ ನೋವು ಅನುಭವಿಸುತ್ತೀರಿ. ಸಂಕಟದಿಂದ ಅದು. ನಿಮ್ಮ ಜನರಿಗೆ ಹೇರ್-ಕಟಿಂಗ್ ಮಾಡಲು ಹಿಂಜರಿಯುತ್ತಾರೆ. ಆಗ ನೀವು ಮಂಡ್ಯಕ್ಕೆ ಹೋಗುತ್ತೀರಿ ಅಷ್ಟೆ. ಇದೇ ರೀತಿಯಲ್ಲಿ ಒಬ್ಬ ಮುದುಕಿ ಬುಟ್ಟಿ ಇಳಿಸಲು ಸಹಾಯಮಾಡಲು ಹೋದಾಗ ಅವಳು ಕೇಳಿದ ಪ್ರಶ್ನೆ: ನೀನು ಯಾವ ಜನ- “ಹರಿಜನರು ಅಂದರೆ ಹೊಲೇರಾ..” ಇದು ನಿಮ್ಮ ಮರ್ಮಕ್ಕೆ ಬಿದ್ದ ಪೆಟ್ಟು. ಆ ಪೆಟ್ಟು ನಿಮಗೆ ದ್ವೇಷವನ್ನಾಗಲಿ, ಕೋಪವನ್ನಾಗಲಿ ತೋರಿಸುವುದಿಲ್ಲ. ಆದರೆ ನಿಮ್ಮ ಮಗಳಿಗೆ ಕಾಲೇಜಿನಲ್ಲಿ ಒಬ್ಬ ಅಧ್ಯಾಪಕ ಹೀನಾಯವಾಗಿ ಮಾತನಾಡಿದಾಗ ರೋಷ ಉಕ್ಕುತ್ತದೆ; ಛಲ ಬೆಳೆಯುತ್ತದೆ.

ಪ್ರಿಯ ಮೂರ್ತಿಯವರೇ, ನಿಮ್ಮ ಮನಸ್ಸಿನ ಆಳದಲ್ಲಿರುವ ಕರುಣೆ (compassion) ಬಹಳ ದೊಡ್ಡಾದು. ಅದನ್ನು ನೀವು ಕೆಲಸಕ್ಕೆ ಸೇರಿಕೊಳ್ಳುವಾಗ ಮತ್ತೊಬ್ಬಳ ಅನ್ನವನ್ನು ನೀವು ಕಿತ್ತುಕೊಂಡಂತೆ ಎನಿಸುತ್ತದೆ. ಈ ವೇದನೆಯಿಂದ ನೀವು ಸೂಪರಿಂಟೆಂಡೆಂಟ್ ರ ಬಳಿ ಹೋಗಿ “ಸಾರ್, ನಾನು ಹದಿನೈದು ದಿನ ಬಿಟ್ಟು ಬಂದು ಸೇರಿಕೊಳ್ತೀನಿ. ಈ ದಿನ ಬೇಡ. ಆ ಹುಡುಗಿಗೆ ಅಷ್ಟು ದಿನಗಳ ಸಂಬಳವಾದರೂ ಸಿಗಲಿ” ಎನ್ನುತ್ತೀರಿ. ತ್ಯಾಗದ ಸುಖ ಕಂಡವರು ನೀವು. ಪಡೆಯುವುದರಲ್ಲಿಲ್ಲ. ಕೊಡುವುದರಲ್ಲಿ ನೀವು ಸುಖ ಅನುಭವಿಸಿದವರು.. ``Anyhow I appreciate your good gesture and kind heart.. ಈಗಲೂ ನಿಮ್ಮಂಥವರು ಇದ್ದಾರಲ್ಲ.. we can't find such a nice people now a days..

ನಿಮ್ಮ ಇಡೀ ಕಥನ ಅನೇಕ ಹೊಯ್ದಾಟಗಳಿಂದ ಕೂಡಿದೆ. ನಿಮ್ಮ ಮಚ್ಚೆಯ ನೋವು.. ಅದು ತಂದ ಕೀಳರಿಮೆ.. ಪ್ರೀತಿಗಾಗಿ ಹಂಬಲ, ಹುಡುಕಾಟ, ಮುಂಬಯಿ ಪ್ರಯಾಣ, ಮೋಸದ ಪ್ರಸಂಗ, ಸಿನಿಮಾರಂಗದ ಒಳನೋಟ, ಹಿಜಡಗಳ ಕಾಟ, ಹೋಮೋಸೆಕ್ಸ್ ಹಗರಣ, ಒಂದೇ ಎರಡೇ... “ಯಾವುದೇ ಒಬ್ಬ ಯಶಸ್ವೀ ವ್ಯಕ್ತಿಯ ಬದುಕನ್ನು ಹತ್ತಿರದಿಂದ ನೋಡಿದಾಗ ಅವನು ನಡೆದು ಬಂದ ಹಾದಿ ಎಷ್ಟು ಸಂಕಷ್ಟಗಳಿಂದ, ಕಠಿಣತೆಯಿಂದ ಕೂಡಿರುತ್ತದೆ” ಅಲ್ಲವೇ? ನಿಮ್ಮ ಮಾತನ್ನೇ ಸ್ವಲ್ಪ ಬದಲಾಯಿಸಿ ಹೇಳುವುದಾದರೆ “ಕೆಲವರ ಜಾಯಮಾನವೇ ಅಷ್ಟು. ಕಷ್ಟದಲ್ಲಿ ಹುಟ್ಟುತ್ತಾರೆ. ಕಷ್ಟದಲ್ಲೇ ಬೆಳೆಯುತ್ತಾರೆ. ಕಷ್ಟದಲ್ಲೇ ಜೀವಿಸುತ್ತಾರೆ.” ಕೊನೆಗೆ- ಒಳ್ಳೆಯದರಲ್ಲಿ ಬದುಕುತ್ತಾರೆ.

ಹಾಗೆ ನೀವು.. ಬೇಬಿ, ಚಿಲ್ಲು, ದೊರೆ

-ಡಾ.ಜಯಪ್ರಕಾಶ ಮಾವಿನಕುಳಿ.