Reviews from Magazines
ವಾರ/ಮಾಸ ಪತ್ರಿಕೆಗಳಿಂದ ವಿಮರ್ಶೆಗಳು
“ಗೆರೆ ದಾಟಿದ ಮೇಲೆ’’

ಸುಧಾ

ಬ್ಯಾಂಕಿನಲ್ಲಿ ಉದ್ಯೋಗಿಯಾಗಿ ನಿವೃತ್ತವಾಗಿರುವ ಮೈಸೂರಿನ ಎಂ.ಎಸ್.ಪರಶಿವಮೂರ್ತಿ ಆ ಕಾಲದಲ್ಲೇ ಪ್ರೇಮವಿವಾಹವಾಗಿ ಪಡಬಾರದ ಕಷ್ಟ ಪಟ್ಟವರು. ಇದೇ ಮೊದಲ ಬಾರಿಗೆ ಪೆನ್ನು ಹಿಡಿದಿರುವ ಅವರು ಬರೆದ ಆತ್ಮಕಥನ ‘ಗೆರೆ ದಾಟಿದ ಮೇಲೆ’ಯನ್ನು ರೂಪ ಪ್ರಕಾಶನ ಹೊರತಂದಿದೆ. ವೃತಿಪರ ಲೇಖಕರಲ್ಲದ ಮೂರ್ತಿಯವರ ಗದ್ಯ ಅತ್ಯಂತ ಸೊಗಸಾಗಿದೆ. ಇಲ್ಲಿ ಮನುಷ್ಯ ಸಂಬಂಧಗಳ ಕುರಿತು ಹೊಸ ಒಳನೋಟಗಳಿವೆ.

- ಸುಧಾ’ ವಾರಪತ್ರಿಕೆ (೬ ಮೇ ೨೦೧೦)
(‘ಅಪ್ಪನೊಂದಿಗೆ ಮುಖಾಮುಖಿ’ ಅಧ್ಯಾಯವನ್ನು ‘ಸುಧಾ’ ವಾರಪತ್ರಿಕೆಯಲ್ಲಿ ಪ್ರಕಟಿಸುತ್ತಾ..)


ಮಯೂರ

ಸಹಜ ಚೆಲುವಿನ ಕಥನ

ಎಂ.ಎಸ್.ಪರಶಿವಮೂರ್ತಿ ವೃತ್ತಿಯಿಂದ ಬ್ಯಾಂಕ್ ಅಧಿಕಾರಿ. ಓದುವ ಖುಶಿ ಅವರಿಗಿಷ್ಟವಾದರೂ ಬರವಣಿಗೆ ಅವರ ಹವ್ಯಾಸವೇನೂ ಅಲ್ಲ. ‘ಗೆರೆ ದಾಟಿದ ಮೇಲೆ’ ಆತ್ಮಕಥನದ ಮೂಲಕ ಮಧ್ಯಮ ವಯಸ್ಸು ದಾಟಿದ ನಂತರ ಬರವಣಿಗೆ ಆರಂಭಿಸಿದವರ ಸಾಲಿಗೆ ಅವರು ಸೇರಿದ್ದಾರೆ.

ಹಳೆಯ ದಿನಚರಿ ಪುಸ್ತಕಗಳ ಮರುಓದು ಹಾಗೂ ತನ್ನ ಅನುಭವಗಳು ಇತರರಿಗೂ ತಲುಪಬೇಕು ಎನ್ನುವ ಹಂಬಲ ಮೂರ್ತಿ ಅವರನ್ನು ಆತ್ಮಕಥೆ ಬರೆಯಲು ಪ್ರೋತ್ಸಾಹಿಸಿವೆ. ಮಹತ್ತರ ಉದ್ದೇಶಗಳೇನೂ ಇಲ್ಲದೆ, ತಮ್ಮ ಬದುಕಿನ ಕಥೆಯನ್ನವರು ಸರಳವಾಗಿ ನಿರೂಪಿಸಿದ್ದಾರೆ. ಪ್ರೀತಿ, ಅನುಕಂಪ, ಅವಮಾನ, ಏಳುಬೀಳು, ದಾಂಪತ್ಯ- ಮುಂತಾದ ಮನುಷ್ಯ ಸಹಜ ಸಂಗತಿಗಳನ್ನು ಅವರು ಪ್ರಾಮಾಣಿಕವಾಗಿ ನಿರೂಪಿಸಿದ್ದಾರೆ. ಈ ಸರಳತೆ ಮತ್ತು ಪ್ರಾಮಾಣಿಕತೆಯ ಕಾರಣದಿಂದಲೇ ಬರವಣಿಗೆಗೊಂದು ಸ್ನಿಗ್ಧ ಸೌಂದರ್ಯ ತಂತಾನೆ ಒದಗಿದೆ. ಬದುಕನ್ನು ಕಾಣುವ ಲೇಖಕರ ಆರೋಗ್ಯಕರ ನೋಟ ಕೂಡ ಪುಸ್ತಕವನ್ನು ಚೆಂದಗಾಣಿಸಿದೆ. ತನ್ನನ್ನು ತಾನು ಮರುವಿಮರ್ಶೆಗೆ ಒಳಪಡಿಸಿಕೊಳ್ಳುವ ಧಾಟಿಯ ಈ ಕಥನ ಸಾವಧಾನದ ಓದನ್ನು ಬಯಸುವಂತಹದ್ದು.

ಜನಸಾಮಾನ್ಯರ ಬದುಕಿನಲ್ಲೂ ಹೇಳಿಕೊಳ್ಳುವಂತಹ ಸಂಗತಿಗಳು ಇರುತ್ತವೆ ಹಾಗೂ ಅವು ಇತರರ ಗಮನವನ್ನು ಸೆಳೆಯಬಲ್ಲಷ್ಟು ಸ್ವಾರಸ್ಯಕರವಾಗಿ, ಅರ್ಥಪೂರ್ಣವಾಗಿ ಇರಬಲ್ಲವು ಎನ್ನುವುದಕ್ಕೆ ‘ಗೆರೆ ದಾಟಿದ ಮೇಲೆ’ ಉದಾಹರಣೆಯಂತಿದೆ. ಈ ಬರಹದ ಯಶಸ್ಸು ಅವರ ಮುಂದಿನ ಬರವಣಿಗೆಯ ಬಗ್ಗೆ ಕುತೂಹಲ ಹುಟ್ಟಿಸುತ್ತದೆ.

- ಮಯೂರ (ಜೂನ್ ೨೦೧೦)


ತಿಂಗಳು

ಎಂ.ಎಸ್.ಪರಶಿವಮೂರ್ತಿಯವರು ನಿವೃತ್ತಿ ನಂತರ ಬದುಕನ್ನು ಹಿಂತಿರುಗಿ ನೋಡಿದಾಗ ತಾವು ಕಂಡುಂಡ ನೋವು-ನಲಿವು, ಸಾಹಸಗಳ ಫಲವೇ ‘ಗೆರೆ ದಾಟಿದ ಮೇಲೆ’ ಆತ್ಮಕಥನದ ಈ ಬರಹ. ಅತ್ಯಂತ ಸರಳವಾಗಿ ಓದಿಸಿಕೊಳ್ಳುವ ಈ ಕೃತಿ ಸಾಮಾನ್ಯನೊಬ್ಬನ ಅಸಾಧಾರಣ ಅನುಭವಗಳ ಒಟ್ಟು ಮೊತ್ತವಾಗಿವೆ. ಅದರಲ್ಲಿ ಒಂದು ತುಣುಕು ನಿಮಗಾಗಿ...

ತಿಂಗಳು( ಜೂನ್ ೨೦೧೦)
(‘ಬೊಂಬಾಯಿಗೆ ಕದ್ದು ಓಡಿದೆ’ ಅಧ್ಯಾಯವನ್ನು ೨೦೧೦ ಜೂನ್ ಮಾಸದ ‘ತಿಂಗಳು’ ಮಾಸಪತ್ರಿಕೆಯಲ್ಲಿ ಪ್ರಕಟಿಸುತ್ತಾ..)