| Dr. Balasaheba Lokapura, 'ratnatraya', 15th cross, Vidyagiri, Bagalakote. |
ಮಾನ್ಯ ಪರಶಿವಮೂರ್ತಿ ಅವರಿಗೆ,
ನೀವು ಪ್ರೀತಿಯಿಂದ ಕಳಿಸಿದ ನಿಮ್ಮ ಆತ್ಮ ಕಥನ ‘ಗೆರೆ ದಾಟಿದ ಮೇಲೆ’ ಓದಿದೆ. ಇನ್ನೊಬ್ಬರ ಕಥೆಯನ್ನು ನಾನು ಯಾಕಾದರೂ
ಓದಬೇಕು ಎನ್ನುವ ಮನಃಸ್ಥಿತಿಯಲ್ಲೇ ಓದತೊಡಗಿದೆ. ಮೊದಲ ಅಧ್ಯಾಯ ‘ಸಂತೆಯಲ್ಲಿ ಸಿಕ್ಕ ಮುತ್ತಜ್ಜ’ ಓದಿದ ಮೇಲೆ
ಪುಸ್ತಕವನ್ನು ಕೆಳಗಿಡಲಿಲ್ಲ. ತುಂಬ ಹೃದ್ಯವಾದ ಬರವಣಿಗೆ. ಇದೊಂದು ಆತ್ಮ ಚರಿತೆ ಎನ್ನುವುದನ್ನು ಮರೆತು ಓದಿದರೆ
ಕಾದಂಬರಿಯಂತೆ ಓದಿಸಿಕೊಂಡು ಹೋಗುವ ಗುಣ ಪಡೆದ ಬರಹ ಇದು. ನಾನು ಈ ಹಿಂದೆ ಕನ್ನಡದ ಮೂರು ದಲಿತ ಆತ್ಮ ಕಥೆಗಳನ್ನು
ಓದಿದ್ದೇನೆ. ಲಕ್ಷ್ಮಣ ಅವರ ಸಂಬೋಳಿ, ಮಾಲಗತ್ತಿ ಅವರ ಗೌರ್ನಮೆಂಟ್ ಬ್ರಾಹ್ಮಣ, ಕೆ.ಗೋವಿಂದರಾಜು ಅವರ ಮನವಿಲ್ಲದವರ
ಮಧ್ಯೆ. ಸಂಬೋಳಿ ನನ್ನನ್ನು ಅಲ್ಲಾಡಿಸಿ ಬಿಟ್ಟ ಆತ್ಮಕಥೆ.
ನಿಮ್ಮ ಪುಸ್ತಕ ಇವಕ್ಕೆ ಬೇರೆಯಾಗಿ ನಿಲ್ಲುವಂತಹದು. ಇದೊಂದು ದಲಿತ ಆತ್ಮಕತೆ ಆಗಿದ್ದರೂ ಇದೇನು ದಲಿತನ ನೋವುಗಳನ್ನು
ಹೇಳಲು ಬರೆಸಿಕೊಂಡದ್ದು ಅಲ್ಲ. ಮಧ್ಯಮ ವರ್ಗದ ನೌಕರಶಾಯಿ ಮಕ್ಕಳ ಅರೆ ಪಟ್ಟಣಗಳಲ್ಲಿ ಬದುಕುವ ಎಲ್ಲ ಸಾಮಾನ್ಯರ ಕಥೆಯೇ
ಆಗಿದೆ. ಏಕೆಂದರೆ ನಿಮ್ಮ ತಂದೆ ಆಗಲೇ ಸಬ್-ರೆಜಿಸ್ಟ್ರಾರ್ ಆಗಿದ್ದುದು ಗ್ರಾಮ ಜಗತ್ತಿನಲ್ಲಿ ದಲಿತರು ಎದುರಿಸುವ
ಸಾಮಾಜಿಕ ವಿಕಾರಗಳಿಂದ ನೀವು ಪಾರಾಗಿದ್ದೀರಿ.
ನಿಮ್ಮ ಪುಸ್ತಕದ ಹೆಗ್ಗಳಿಕೆ ಇರುವುದು ಅದರ ಸರಳ ನಿರೂಪಣೆ ಮತ್ತು ನಿಮ್ಮ ಪ್ರಾಮಾಣಿಕತೆಯಲ್ಲಿ. ಎದೆಗೂಡಲ್ಲಿ
ಪ್ರೀತಿಯನ್ನು ಇಟ್ಟುಕೊಂಡೇ ನೀವು ಮನುಷ್ಯರನ್ನು ಸಂಪರ್ಕಿಸುತ್ತೀರಿ. ನೀವು ಬಾಲ್ಯದಲ್ಲಿ ಅಪ್ಪನ ಹಣ ಎಗರಿಸಿ
ಮುಂಬೈಗೆ ಓಡಿಹೋಗಿ ವಿಫಲರಾಗಿ ಮರಳಿ ಬಂದಿದ್ದು. ಯಾವಳೋ ಒಬ್ಬಳಿಗೆ ಹದಿನೈದು ದಿನದ ಸಂಬಳವಾದರೂ ಸಿಗಲಿ ಎಂದು ತಡವಾಗಿ
ನೌಕರಿಗೆ ಸೇರಿಕೊಳ್ಳುತ್ತೇನೆ ಎನ್ನುವುದು. ಕೋಳಿಯನ್ನು ಯಾಕಾದರೂ ಹಿಡಿದೆ ಎಂದು ಮರುಗುವುದು. ಮೆಚ್ಚಿ ಮದುವೆ
ಆದವಳನ್ನು ಕೈಬಿಡದೆ ತನ್ನ ಕಣ್ಣ ಮುಂದೆಯೇ ಆಗ ಲಕ್ಷ ಈಗ ಕೋಟಿ ರೂಪಾಯಿ ಸೈಟನ್ನು ತಿರುಗಿ ಅಪ್ಪನಿಗೆ ಒಪ್ಪಿಸಿ
ಅವಳೊಂದಿಗೆ ಪ್ರೀತಿಯಿಂದ ಬಾಳುವೆ ಮಾಡುವುದು (ಅವರು ಈಗಲೂ ಇದ್ದಾರೆ ಎಂದುಕೊಂಡಿದ್ದೇನೆ). ಇನ್ನೊಬ್ಬರ ಡೈರಿ ಓದದ
ಹಾಗೆ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡಿದ್ದು- ಹೀಗೆ ಹೇಳುತ್ತಾ ಕೂತರೆ ಮತ್ತೊಮ್ಮೆ ನಿಮ್ಮ ಪುಸ್ತಕವನ್ನು
ನಿಮಗೇ ಹೇಳಿದಂತಾಗುತ್ತದೆ.
ನಿಮ್ಮ ಪುಸ್ತಕದಲ್ಲಿ ಕೆಲವು ಸಂಗತಿಗಳು ಅನಾವಶ್ಯಕ ಎನಿಸಿದವು:
ಇಷ್ಟವಾದ ಸಂಗತಿಗಳು ಬಹಳ ಇವೆ.
ಸರ್ ನೀವು ಚಂದ ಬರೆಯಬಲ್ಲಿರಿ. ನಿಮ್ಮ ಅನುಭವದಿಂದ ಕಾದಂಬರಿ ಒಂದು ರೂಪ ತಾಳಲಿ. ಅಕಸ್ಮಾತ್ ಭೇಟಿ ಆಗುವ ಅವಕಾಶ
ಸಿಕ್ಕರೆ ಕೂತು ಮಾತನಾಡೋಣ. ಇದು ವಿಮರ್ಶೆ ಅಲ್ಲ. ಓದಿದ ತಕ್ಷಣ ನನ್ನ ಅಭಿಪ್ರಾಯಗಳು ಅಷ್ಟೆ.
ನಿಮ್ಮವ
|