Prof.Shivarama Kadanakuppe,
Principal, Vidyavardhaka High School, Mysore-570021.


ಪ್ರೀತಿಯ ಶ್ರೀ ಎಂ.ಎಸ್.ಪರಶಿವಮೂರ್ತಿ ಅವರಿಗೆ ನಮಸ್ಕಾರಗಳು.
ನೀವು ಪ್ರೀತಿಯಿಂದ ನಮ್ಮ ಮನೆಯವರೆವಿಗೂ ಬಂದು ತಲುಪಿಸಿದ ತಮ್ಮ ಆತ್ಮಕಥೆಯನ್ನು ಓದಿ ಮುಗಿಸಿದೆ. ಮೊದಲಿಗೆ ನನ್ನ ಶ್ರೀಮತಿ ಓದಿದಳು. ಅವಳು ಎಡೆಬಿಡದೆ ಓದುವ ಮೂಡನ್ನು ನೋಡಿ ಆಶ್ಚರ್ಯಚಕಿತನಾದೆ. ಅವಳಿಗೆ ಓದು ರುಚಿಸದೆ ಹೋದರೆ ಅರ್ಧಕ್ಕೇ ನಿಲ್ಲಿಸಿಬಿಡುತ್ತಾಳೆ; ತೀಕ್ಷ್ಣವಾಗಿ ಪ್ರತಿಕ್ರಯಿಸುತ್ತಾಳೆ. ಆದರೆ ಅವಳಿಗೆ ಕೃತಿ ಹತ್ತಿರವಾಯಿತು- ಎಂಬುದು ಅವಳ ಸ್ಪಂದನೆಯಿಂದ, ಅವಳೊಮ್ಮೆ ತುಳುಕಿಸಿದ ಕಣ್ಣ ಹನಿಯಿಂದ ವೇದ್ಯವಾಯಿತು. ನಾನು ಅವಳೊಡನೆ ಆ ಬಗ್ಗೆ ಚರ್ಚೆ ಮಾಡಲಿಲ್ಲ. ‘ವತಾನೆ’ದ ಅರ್ಥ ದೊಡ್ಡದು. ಅದನ್ನು ಸರಳಗೊಳಿಸುವುದು ನನಗಿಷ್ಟವಿಲ್ಲದ ಮಾರ್ಗ.

ಬಹುಶಃ ನೀವು ನನಗಿಂತ ಎರಡು ಮೂರು ವರ್ಷ ಹಿರಿಯರಿರಬಹುದು. ಮಂಡ್ಯದ ನಿಮ್ಮ ಬಾಲ್ಯದ ಪರಿಸರ ನನಗೂ ಪರಿಚಿತವೇ. ಅಲ್ಲೆಲ್ಲ ನಾನು ಅಲೆದಾಡಿದ್ದೇನೆ-ಹುಚ್ಚನಂತೆ. ನಿಮ್ಮ ಆ ಅನುಭವಗಳು ಅತ್ಯಂತ ಆತ್ಮೀಯವಾಗಿ ದಾಖಲಾಗಿವೆ.

ನಿಮ್ಮ ಕೃತಿಯನ್ನು ಓದಿ ನನಗೆ- ಒಂದೆರಡು ಕಡೆ ಕಂಬನಿಯೂ ಹರಿದಿದೆ. ತುಂಬಾ ಹೃದಯಕ್ಕೆ ನಾಟಿದ್ದು- ನಿಮ್ಮ ಪ್ರಾಮಾಣಿಕತೆ. ಇಂದಿನ ನಮ್ಮ ಬರಹಗಾರರಲ್ಲಿ ಅದರ ಕೊರತೆ ಎದ್ದು ಕಾಣುತ್ತಿರುವುದು ನನ್ನಂಥವರಿಗೆ ಆತಂಕವನ್ನುಂಟುಮಾಡುತ್ತಿದೆ. ಅದರಲ್ಲೂ ನಮ್ಮ ದಲಿತ ಬರಹಗಾರರಲ್ಲಿ ಇದು ಕಣ್ಬೆಳಕಿನಷ್ಟು ನಿಚ್ಚಳ. ತಮ್ಮ ಬದುಕಿನ ಮಂಡನೆಯೆಂಬುದು ವರ್ತಮಾನದ ರಕ್ಷಾಕವಚವಾಗಿ ಬಳಕೆಯಾಗಬಾರದು; ವೈಭವೀಕರಣವಾಗಬಾರದು. ಅದು ನಿಮ್ಮಲ್ಲಿ ಆಗಿಲ್ಲವೆಂಬುದೇ ನನ್ನ ಅಭಿಮಾನಕ್ಕೆ ಕಾರಣವಾಗಿದೆ. ನಾನು ಕಳೆದೆರಡು ದಶಕಗಳಲ್ಲಿ ಓದಿದ ದಲಿತ ಆತ್ಮಕಥನಗಳಲ್ಲಿ- ಮರಾಠಿಯೂ ಒಳಗೊಂಡಂತೆ- ನಿಮ್ಮದು ಉತ್ತಮ ಬರಹ. ಇದೊಂದು ಮುಖ್ಯ ಪ್ರಮಾಣಿಕ ಕಥಾನಕವಾಗಿ ಖಂಡಿತ ದಾಖಲಾಗುತ್ತದೆ. ಇದು ನನ್ನ ಓದಿನ ವ್ಯಾಪ್ತಿ, ಅನುಭವ ಮತ್ತು ಗ್ರಹಿಕೆಯ ಆಧಾರದ ಮೇಲೆ ಹೇಳುತ್ತಿದ್ದೇನೆ.

ನಿಮ್ಮ ಆತ್ಮಕಥನದ ಹಿರಿತನವೇ ಅದರ ಪ್ರಾಮಾಣಿಕತೆಯೆಂದು ಈ ಮೊದಲೇ ಹೇಳಿದ್ದೇನೆ. ನಿಮ್ಮ ಪ್ರತಿ ಬರಹದ ಒಂದೊಂದು ಸಾಲಿನಲ್ಲಿ ಅದು ಆತ್ಮನಿವೇದನೆಯ ರೀತಿಯಲ್ಲಿ ಸಾಗುತ್ತದೆ. ಅದರಲ್ಲಿ ಕೀಳರಿಮೆ ಇದೆ; ಮುಗ್ಧತನವಿದೆ; ಮೂರ್ಖತನವಿದೆ; ಅವಿವೇಕತನವಿದೆ; ತಿಕ್ಕಲುತನವಿದೆ. ಇವುಗಳನ್ನು ಯಾವುದನ್ನೂ ಮುಚ್ಚಿಕೊಳ್ಳದೆ ನೀವು ಬರೆದಿದ್ದೀರಿ. ನಿಮ್ಮ ಜಾತಿಯ ವಿಷಮಗಳು- ಜಾತೀಯತೆ- ವರ್ಗವೈಷಮ್ಯತೆ ಎಲ್ಲವೂ ಮುಖ್ಯ ಧಾರೆಯ ಇತರೆ ಸ್ಟ್ರೀಮ್‍ಗಳಂತೆ ಹರಿವುದು ಮುಖ್ಯ. ನನಗೆ ಮೆಚ್ಚುಗೆಯಾದ ಮತ್ತೊಂದು ಅಂಶ- ನಿಮ್ಮ ನಿರ್ಮಲ ಮನಸ್ಸು. ಅದರಲ್ಲಿ ದೋಷವಿಲ್ಲ; ಮತ್ಸರವಿಲ್ಲ. ಎಲ್ಲವನ್ನೂ ಸ್ನೇಹ-ಪ್ರೀತಿಗಳಿಂದಲೇ ಕಾಣುವ ಮನಃಸ್ಥಿತಿ ಸಾಧಿತವಾಗಿರುವುದು- ಇಂದಿನ ರಾಗದ್ವೇಷಾದಿ ಜಗತ್ತಿನಲ್ಲಿ ವಿಭಿನ್ನವಾಗಿದೆ.

ನೀವು ಹೆಂಗರುಳು. ಅದು ಪುಟ ಪುಟದಲ್ಲೂ ವ್ಯಕ್ತವಾಗುತ್ತದೆ. ಅದರಿಂದಾಗಿಯೇ ಒಂದು ಬಗೆಯ ಮಾತೃತ್ವ ನಿಮ್ಮ ವ್ಯಕ್ತಿತ್ವಕ್ಕೆ ದತ್ತವಾಗಿದೆ. ನಿಮ್ಮ ಹೆಂಡತಿ ಮಕ್ಕಳನ್ನು ನೀವು ನೋಡಿಕೊಳ್ಳುವ ಬಗೆಯಲ್ಲಿ ಅದು ನವಿರಾಗಿ ಹರಿದಾಡುತ್ತದೆ. ಈ ಹಂತದಲ್ಲಿ ನಿಮ್ಮ ತಂದೆತಾಯಿಗಳ (ಆಗಿನ) ಧೋರಣೆಯನ್ನು ತುಲನೆ ಮಾಡಿ ನೋಡುವ ದೃಷ್ಟಿಯಲ್ಲಿ ಆತ್ಮವಿಮರ್ಶೆ, ಪಶ್ಚಾತ್ತಾಪ ಎದ್ದುಕಾಣುತ್ತದೆ. ತಂದೆತಾಯಿಗಳ ಕಠೋರತೆಯ ನಡೆ ಕೆಳಜಾತಿಗಳಲ್ಲೂ ಇರಬಹುದಾದ feudal mind ಅನ್ನು ಎತ್ತಿ ತೋರಿಸುತ್ತದೆ. ಈ ನಡತೆ ಪ್ರತಿಜಾತಿಯಲ್ಲೂ ತನ್ನ ವರ್ತುಲದೊಳಗೇ ಅದನ್ನು ಚಲಾಯಿಸುವ ಕ್ರಿಯೆಯನ್ನು ಮಾಡುತ್ತಿರುತ್ತದೆ. ಇದಕ್ಕೆ ಕ್ರಿಶ್ಚಿಯನ್ನರೂ ಹೊರತಲ್ಲ; ದಲಿತರೂ ಹೊರತಲ್ಲ.

ನಿಮ್ಮ ಬರವಣಿಗೆಗೆ ಓದಿಸಿಕೊಂಡು ಹೋಗುವ ಗುಣವಿದೆ. ಅದು ತನಗೆ ತಾನು ಸಾಹಿತ್ಯವಾಗಿದೆ. (ಕೊನೆಯ ನಾಲ್ಕಾರು ಅಧ್ಯಾಯಗಳ ಬಗ್ಗೆ ಆ ಮಾತು ಹೇಳಲಾರೆ).
ನಿಮ್ಮ ವೆಬ್‍ಸೈಟ್ ಅನ್ನು ನಾವು ಮನೆಮಂದಿ ನೋಡಿದೆವು. ನಿಮ್ಮ ಪೆಯಿಟಿಂಗ್ಸ್, ಛಾಯಾಚಿತ್ರಗಳು- ಕೆಲವು ಪ್ರಿಯವಾದವು.
ವಿಭಿನ್ನ ಅನುಭವಗಳ ನಿಮ್ಮ ಆತ್ಮಕಥನ ಓದಿ ಸಂತೋಷಪಟ್ಟಿದ್ದೇನೆ; ಅರಿವು ಮೂಡಿಸಿಕೊಂಡಿದ್ದೇನೆ.
ನಿಮಗೆ ಒಳಿತಾಗಲಿ. ನಿಮ್ಮಿಂದ ಈ ಬಗೆಯ ಬರಹಗಳು ಹೊರಬರಲೆಂದು ಆಶಿಸುತ್ತೇನೆ. ವಂದನೆಗಳು

ತಮ್ಮ ವಿಶ್ವಾಸದ
-ಪ್ರೊ. ಶಿವರಾಮ ಕಾಡನಕುಪ್ಪೆ.

(20-5-2010)