| Dr.Krishnamurthy Hanur Kuvempu Adhyayana Samsthe, University of Mysore, Manasagangothri, Mysore. |
|
ಮಿತ್ರರಾದ ಎಂ.ಎಸ್.ಪರಶಿವಮೂರ್ತಿಯವರು ತಮ್ಮ ಪುಸ್ತಕ ‘ಗೆರೆ ದಾಟಿದ ಮೇಲೆ’ ತಂದುಕೊಟ್ಟರು. ಎರಡು ದಿನಗಳಲ್ಲಿ ಓದಿ
ಮುಗಿಸಿದೆ. ರಾತ್ರಿಯ ರೈಲು ಕೂಗುತ್ತ, ಕೂಗುತ್ತ ದೂರದ ನಮ್ಮ ಬಾಲ್ಯದ ನೆಲೆಯ ಊರಿಗೆ ಹರಿದಂಥ ಅನುಭವ. ಲೇಖಕರ ಅನುಭವ
ವ್ಯಾಪ್ತಿಗೊಮ್ಮೆ ದಿಗ್ಭ್ರಮೆಯಾಯಿತು. ಇದೇನೆ ಇರಲಿ, ಈ ದಶಕದ ಆತ್ಮಕಥೆಗಳು ಪಡೆದುಕೊಂಡಂಥ ತಿರುವು ಬೇರೆಯದೇ ಆಗಿದೆ.
ಕನ್ನಡದಲ್ಲಿಯೂ ಮರಾಠಿ ಆತ್ಮಕಥನಗಳ ಮಾದರಿಗಳು ಬಂದವು. ಆದರೆ ಅವು ಒಂದು ನೆಲೆಯಲ್ಲಿ ಹೆಚ್ಚು ಸಾವ್ರತ್ರಿಕ
ಅನ್ನಿಸಿಕೊಳ್ಳದೆ, ವೈಯಕ್ತಿಕ ಸಂಗತಿಗಳನ್ನು ಹೇಳುವಂಥವು. ಸಾಹಿತ್ಯದ ಶ್ರೇಷ್ಠತೆ ಇರುವುದೇ ಒಬ್ಬ ಲೇಖಕ ತನ್ನ
ಸಂಗತಿಗಳನ್ನು ಹೇಗೆಲ್ಲ ಸಾವ್ರತ್ರಿಕಗೊಳಿಸುತ್ತಾನೆ ಎಂಬುದರಲ್ಲಿ! ಅಕ್ಕಮಹಾದೇವಿ, ಬಸವಣ್ಣನವರ ವೈಯಕ್ತಿಕ
ಅನುಭವಗಳನ್ನು ಹೇಳುವ ಅನೇಕ ವಚನಗಳು, ಅವರದೇ ಅನುಭವ ಅನ್ನಿಸಿಕೊಳ್ಳುವುದಕ್ಕಿಂತ ಅವು ಓದಿಸಿಕೊಂಡ ಘಳಿಗೆಯಲ್ಲೇ
ಇದು ಸಾಮಾಜಿಕ ಅನ್ನಿಸಿಕೊಂಡುಬಿಡುತ್ತದೆ. ಈ ಸೃಜನಶೀಲ ಪ್ರಕ್ರಿಯೆ ನಿಜಕ್ಕೂ ಕಷ್ಟಕರವಾದುದು.
ಪರಶಿವಮೂರ್ತಿಯವರು ಬ್ಯಾಂಕ್ ಅಧಿಕಾರಿಗಳು. ಅವರ ಹುಟ್ಟು ಬೆಳವಣಿಗೆ ಸಾಮಾನ್ಯ ರೀತಿಯದೆ. ಅನೇಕ ಬಗೆಯ ನಿಂದೆ,
ಶೋಷಣೆ, ಸಮಸ್ಯೆಗಳಿಗೆ ಈಡಾದವರು. ಅಂದುಕೊಂಡದ್ದನ್ನು ನೆರವೇರಿಸಲಾಗದೆ ತೊಳಲಿದವರು. ಹಾಗೆಂದು ಅವರು ತಮ್ಮ ಆತ್ಮಕಥನದ
ಉದ್ದಕ್ಕೂ ಯಾರಮೇಲೂ ಎಂಥ ಸಂದರ್ಭದಲ್ಲೂ ದ್ವೇಷ ಸಾಧಿಸುವುದಿಲ್ಲ. ಬದಲಿಗೆ ತಮ್ಮ ಮನಸ್ಸಿನೊಂದಿಗೇ
ಮುಖಾಮುಖಿಯಾಗುತ್ತಾರೆ. ತಮ್ಮ ಆತ್ಮಸಾಕ್ಷಿಯನ್ನೇ ಅಗೆದಗೆದು ನೋಡುತ್ತಾರೆ. ಅತ್ಯಂತ ಸಮಾಧಾನ ಚಿತ್ತದಿಂದ ತಮ್ಮ
ವಿವೇಕ, ಅವಿವೇಕಗಳನ್ನು ಒರೆಗೊಡ್ಡಿ ನೋಡಿಕೊಳ್ಳುತ್ತಾರೆ ಕೂಡ. ತಮ್ಮ ಬದುಕಿನ ಹಾದಿ ಬದಲಾದಾಗಲೆಲ್ಲ ಅದರ ಅರಿವಾಗಿ,
ತಾನು ಕ್ರಮಿಸುತ್ತಿರುವ ಮಾರ್ಗ ದಿಕ್ಕುತಪ್ಪಿರಬಹುದೇ ಎನಿಸಿ ಹೆತ್ತವರ ಮುಂದೆ ನಿಂತು ತಲೆಬಾಗುತ್ತಾರೆ.
ಇದೆಲ್ಲಕ್ಕಿಂತ ಮುಖ್ಯ ಪರಶಿವಮೂರ್ತಿಯವರ ತಾಯ್ತನದ ಅಂತರಂಗ ಇಟ್ಟುಕೊಂಡೇ ತಮ್ಮ ಬದುಕನ್ನೂ, ಜಗತ್ತನ್ನೂ
ನೋಡಹೊರಟಿದ್ದನ್ನು ಇಲ್ಲಿ ಮುಖ್ಯವಾಗಿ ಪ್ರಸ್ತಾಪಿಸಬೇಕು. ಆತ್ಮಾಭಿಮಾನವುಳ್ಳ ಹೆಣ್ಣುಮಗಳೊಬ್ಬಳು ತನ್ನ ಬದುಕು
ನೀಗಲು ನಡುವಿಗೆ ಸೆರಗು ಸುತ್ತಿ ನಿಂತಂತೆ ಮೂರ್ತಿಯವರು ನಿಲ್ಲುತ್ತಾರಾದರೂ ಸಾಯುವ ಕೋಳಿಯ ದುಃಖವನ್ನು ನೋಡಲಾರರು.
ಕೋಳಿಯ ಕತ್ತಿಗೆ ಚೂರಿಹಾಕಲು ಬಂದ ದೊಡ್ಡವ್ವನ ಕೈಯ ಆಯುಧ ನೋಡಿ, ಅಷ್ಟು ಹೊತ್ತೂ ತಾರಾಡಿ ಹಿಡಿದಿದ್ದ ಹುಂಜವನ್ನು
ಬಿಟ್ಟು ಓಡುತ್ತಾರೆ. ದಿನವಿಡೀ ದುಡಿಯುವ ಮನೆಗೆಲಸದವಳ ಬವಣೆಗೆ ಲೇಖಕರ ತಾಯ್ಗರುಳು ಮಿಡಿಯುತ್ತದೆ. ಅಷ್ಟೇ ಅಲ್ಲ,
ಅಂತರ್ಜಾತಿಯ ವಿವಾಹ ತಂದ ವಿಷಮ ಘಳಿಗೆಯಲ್ಲಿ ದಿಕ್ಕಿಲ್ಲದೆ ಆಸ್ಪತ್ರೆಯ ಹೊರ ಆವರಣದ ಕೊಳೆ ಹಾಸಿಗೆ, ಹರಿದ ಕಂಬಳಿಯಡಿ
ಮಲಗಿ ಹೆರಿಗೆ ಬೇನೆ ಅನುಭವಿಸುವ ತಮ್ಮ ಪತ್ನಿಯ ಸಕಲ ಸಂಕಟಗಳನ್ನೂ ಬರಿಗೈಯ್ಯಲ್ಲಿ ಹೊರಗೆ ಕೂತು ಅನುಭವಿಸುತ್ತಾರೆ.
ಈ ಕೃತಿಯ ಒಟ್ಟು ಬರಹವೇ ಒಂದು ಸಂಕ್ರಮಣ ಕಾಲದ ಸಮಸ್ಯೆ. ಅಂದರೆ ೧೯೭೦ ರ ಸುಮಾರು. ಎಲ್ಲರೂ ಅಕ್ಷರಜಗತ್ತಿಗೆ ಕಣ್ಣು
ತೆರೆಯುತ್ತಿದ್ದ ಕಾಲ. ಎಲ್ಲ ಕಾಲದಂತೆ ಆಗಲೂ ಇದ್ದ ಜಾತಿ ತಾರತಮ್ಯ, ಕಾಲೇಜುಗಳಲ್ಲಿಯೂ ಇದ್ದ ಮಡಿ, ಮೈಲಿಗೆ,
ಆ ಕಾಲಕ್ಕೂ ಸಿನಿಮಾ ಮಾಧ್ಯಮ ಬೀರುತ್ತಿದ್ದ ವಿಚಿತ್ರ ಪ್ರಭಾವ, ಇದರಿಂದ ಬಿಡುಗಡೆ ಹೊಂದಲಾಗದೆ, ಬದುಕನ್ನು
ವ್ಯಾಪಕದೃಷ್ಟಿಯಲ್ಲಿ ನೋಡಲಾಗದೆ ಯುವಸಮೂಹ ತೊಳಲಾಡುತ್ತಿದ್ದ ಸಂದರ್ಭವದು. ಮಾಸ್ತಿ ಅಯ್ಯಂಗಾರ್ ಅಂಥವರೂ ವಾರಾನ್ನ
ಸಿಗದಿದ್ದರೆ, ಕುವೆಂಪು ಅವರು ಮಲೆನಾಡು ಬಿಟ್ಟುಬಂದು ವಿದ್ಯೆ ಕಲಿಯದಿದ್ದರೆ ತಮ್ಮ ಬದುಕು ಯಾವ
ದುರಂತವನ್ನಪ್ಪುತ್ತಿತ್ತೋ ಎಂದು ಹೇಳಿಕೊಂಡಿರುವುದುಂಟು. ಅರವತ್ತು, ಎಪ್ಪತ್ತರ ವೇಳೆ ಅಥವಾ ಅದಕ್ಕಿಂತಲೂ ಹಿಂದೆ
ವಿದ್ಯಾಭ್ಯಾಸ ಎಂದರೆ ಅದೆಲ್ಲ ಪವಾಡದಂತೆ ಅಕಸ್ಮಾತ್ತಾಗಿ ಜರುಗುತ್ತಿದ್ದ ವ್ಯವಹಾರ. ಇಂಥ ಅನೇಕ ಅಚಾನಕಗಳನ್ನು ದಾಟುವ
ಪರಶಿವಮೂರ್ತಿಯವರ ಈ ರೋಚಕ ಆತ್ಮಕಥನ, ಕನ್ನಡ ಆತ್ಮಕಥನಗಳಲ್ಲೇ ಒಂದು ಉತ್ತಮ ಕೃತಿ.
ಸಣ್ಣ ಸಣ್ಣ ವಾಕ್ಯಗಳಲ್ಲಿ ತಮ್ಮ ಅನುಭವಗಳನ್ನು ಅತ್ಯಂತ ಪ್ರಾಮಾಣಿಕವಾಗಿಯೂ, ಮುಗ್ಧವಾಗಿಯೂ ನಿರೂಪಿಸಿಕೊಂಡು ಹೋಗುವ
ಲೇಖಕರ ಅನುಭವವು ಒಮ್ಮೊಮ್ಮೆ ಓದುಗರ ಅನುಭವವೂ ಆಗಿಬಿಡುತ್ತದೆ. ಕೃತಿಯಲ್ಲಿ ಅಂಥ ಅನೇಕ ಭಾಗಗಳಿವೆ. ಆತ್ಮಕಥನ
ಸೋಲುವುದು ವೈಯಕ್ತಿಕ ಅನುಭವಗಳನ್ನು ಸಾವ್ರತ್ರಿಕವಾಗಿಸದೇ ಹೋಗುವಲ್ಲಿ. ಆದರೆ ಪರಶಿವಮೂರ್ತಿಯವರ ಅನುಭವ ಕಥನ ಓದುಗರ
ಅನುಭವಗಳನ್ನು ಹಂಚಿಕೊಂಡೇ ನಡೆಯುತ್ತದೆ.
ಕೃತಿಯ ಕೊನೆಯ ಭಾಗವೊಂದು ಹೀಗಿದೆ-‘...ನನ್ನ ಯೌವನದ ದಿನಗಳಲ್ಲಿ ನನ್ನ ತಂದೆತಾಯಿಯರನ್ನು ದೂಷಿಸುತ್ತಿದ್ದೆ,
ದ್ವೇಷಿಸುತ್ತಿದ್ದೆ. ‘ಅವರು ನನಗಾಗಿ ಏನೂ ತ್ಯಾಗ ಮಾಡಿಲ್ಲ’ ಎಂಬುದು ನನ್ನ ದೂರಾಗಿತ್ತು. ಆದರೆ ನನ್ನಲ್ಲಿ ವಿವೇಕ
ಮೂಡಲಾರಂಭಿಸಿದ ಮೇಲೆ, ಕುಳಿತು ಯೋಚಿಸಿದೆ- ‘ಅವರು ನನಗಾಗಿ ಏನೂ ಮಾಡಲಿಲ್ಲ’ ಅನ್ನುವ ದೂಷಣೆಯನ್ನು ಕೊಂಚಕಾಲ
ಬದಿಗಿಟ್ಟು, ‘ಅವರು ನನಗಾಗಿ ಏನೇನು ಮಾಡಿದ್ದಾರೆ’ ಎಂಬುದರ ಬಗ್ಗೆ ಯೋಚಿಸಿದೆ. ನಮ್ಮ ತಂದೆ ನನಗೆ ಶಾಲೆಗೆ ಕಳುಹಿಸಿ
ವಿದ್ಯಾವಂತನನ್ನಾಗಿ ಮಾಡಿದ್ದಾರೆ. ನನಗೆ ಇಪ್ಪತ್ತು ವರ್ಷಗಳ ಕಾಲ ಊಟ ವಸತಿ ಕೊಟ್ಟಿದ್ದಾರೆ. ನನ್ನ ತಾಯಿ ನನ್ನನ್ನು
ಹೆತ್ತು ಹೊತ್ತು ಎದೆಹಾಲುಣಿಸಿ ಪೋಷಿಸಿದ್ದಾಳೆ. ಅಷ್ಟು ಸಾಕಲ್ಲವೇ ನಾವು ಅವರಿಗೆ ಚಿರಋಣಿಯಾಗಿರಲು. ಅಷ್ಟು
ಸಾಕಲ್ಲವೇ ಅವರನ್ನು ದೇವರಿಗೆ ಸಮಾನರೆಂದು ಪರಿಗಣಿಸಲು, ಪೂಜಿಸಲು.. ಆ ಋಣದ ಒಂದಂಶವನ್ನಾದರೂ ತೀರಿಸಲು
ಸಾಧ್ಯವಾಗಿದೆಯೇ ನಮಗೆ? ನಾವು ಯೋಚಿಸುವ ರೀತಿಯನ್ನು ಬದಲಿಸಿಕೊಂಡ ತಕ್ಷಣವೇ ದ್ವೇಷ, ಕೋಪ, ತಾಪ ಎಲ್ಲವೂ ಮಾಯವಾಗಿ
ಒಂದು ಪೂಜ್ಯಭಾವನೆ ಉದ್ಭವಿಸಿ ನಮ್ಮ ಹೃದಯಲ್ಲಿ ಎಷ್ಟು ಪ್ರಶಾಂತತೆ ನೆಲೆಗೊಳ್ಳುವಂತೆ ಮಾಡಿತು...’ ತಮ್ಮ ಅನುಭವಗಳ
ಮೂಲಕ ತಾವೇ ಕಂಡುಕೊಂಡ ಸತ್ಯವನ್ನು ಲೇಖಕರು ಓದುಗರ ಮುಂದಿರಿಸುತ್ತಾರೆ. ಧರ್ಮಗಳನ್ನು ತಳ್ಳಿ ಬದುಕಿನ ಧರ್ಮವನ್ನು
ನೆನೆಯುತ್ತಾರೆ. ನೂರು ದೇವರನ್ನು ನೂಕಿ ಆಧ್ಯಾತ್ಮವನ್ನು ನಂಬುತ್ತಾರೆ. ತಮ್ಮ ಬದುಕಿನ ಎಲ್ಲ ಸಮಸ್ಯೆಗಳನ್ನೂ ಓದುಗರ
ಮುಂದಿಟ್ಟು ಲೇಖಕರು ಒಂದು ನಿಲುಗಡೆಗೆ ಬಂದು ಇಲ್ಲುತ್ತಾರೆ. ಆ ನಿಲುಗಡೆ ಎಂದರೆ ಮಾನವೀಯತೆಗೆ ಸಂಬಂಧಪಟ್ಟದ್ದು!
ಆಧುನಿಕ ವಿದ್ಯಮಾನಗಳಿಂದಾಗಿ ಆತುರದ ನಿರ್ಧಾರಗಳನ್ನು ಕೈಗೊಳ್ಳುತ್ತಿರುವ ಯುವಸಮೂಹಕ್ಕೂ ಈ ಕೃತಿ ಒಂದು ಸಣ್ಣ
ಎಚ್ಚರಿಕೆ ನೀಡುವಂತಿದೆ. ಆ ಎಚ್ಚರಿಕೆ ವಿವೇಚನೆಗೆ ಸಂಬಂಧಪಟ್ಟದ್ದು. ಈ ಬಗೆಯ ಸಂಯಮದ ಮತ್ತು ಪ್ರಾಮಾಣಿಕ
ಬರವಣಿಗೆಗಾಗಿ ಲೇಖಕ ಪರಶಿವಮೂರ್ತಿಯವರನ್ನು ಅಭಿನಂದಿಸುತ್ತೇನೆ. ಈ ಕೃತಿ ಹೆಚ್ಚು ಜನರನ್ನು ತಲುಪಲಿ ಎಂಬುದು
ಹಾರೈಕೆ.
-ಡಾ.ಕೃಷ್ಣಮೂರ್ತಿ ಹನೂರು |