Sri. D.S.Nagabhooshana,
HIG-5, 'Nudi', KallahaLLi Extension, Vinoba nagara, Shimoga-577204.

ಪ್ರಿಯ ಶ್ರೀ ಪರಶಿವಮೂರ್ತಿ ಅವರಲ್ಲಿ,

ನೀವು ವಿಶ್ವಾಸದಿಂದ ಕಳುಹಿಸಿದ್ದ ನಿಮ್ಮ ‘ಗೆರೆ ದಾಟಿದ ಮೇಲೆ’ ಪುಸ್ತಕವನ್ನು ಓದಿ ಮುಗಿಸಿದೆ. ನನಗೆ ಹೀಗೆ ವಾರಕ್ಕೆ ಎರಡು ಮೂರು ಪುಸ್ತಕಗಳಾದರೂ ಬರುತ್ತವೆ. ಎಲ್ಲದರ ಮೇಲೆ ಒಮ್ಮೆ ಕಣ್ಣಾಡಿಸಿ, ಓದಬೇಕೆನಿಸಿದ್ದನ್ನು ಬಿಡುವಾದಾಗ ಓದಲೆಂದು ಪ್ರತೇಕವಾಗಿ ತೆಗೆದಿರಿಸುತ್ತೇನೆ. ಆದರೆ ನಿಮ್ಮ ಪುಸ್ತಕವನ್ನು ಒಮ್ಮೆ ಕಣ್ಣಾಡಿಸಿದ್ದರ ಜೊತೆಯಲ್ಲಿ ಪೂರ್ತಿ ಓದಲು ನಿರ್ಧರಿಸಿದೆ. ನಿಮ್ಮ ಬದುಕು ಮತ್ತು ಅದನ್ನು ಪ್ರಸ್ತುತ ಪಡಿಸಿರುವ ಪ್ರಬುದ್ಧ ಶೈಲಿ ಇದಕ್ಕೆ ಕಾರಣವಿರಬಹುದು.

ನಿಮ್ಮದು ಸರಾಗವಾಗಿ ಓದಿಸಿಕೊಂಡು ಹೋಗಬಲ್ಲ ಸರಳ ಭಾಷೆಯ, ನೇರ ಹಾಗೂ ಪ್ರಾಮಾಣಿಕ ಶೈಲಿಯ ಬರಹ. ಜೊತೆಗೆ, ನಮ್ಮ ತಲೆಮಾರು ಒಂದು ನಿರ್ಣಾಯಕ ‘ಸಾಮಾಜಿಕ ಪರಿವರ್ತನೆ’ಯ ಘಟ್ಟದಲ್ಲಿ ಹಾದುಹೋದ ವೈವಿಧ್ಯಮಯ ಅನುಭವದ ಕಥನವೂ ಇದಾಗಿದ್ದುದರಿಂದ ಕೊನೆವರೆಗೂ ಕುತೂಹಲ ಕಾಯ್ದುಕೊಂಡು ಹೋಗುತ್ತದೆ. ನೀವು ಒಳ್ಳೆಯ ಕಥನಕಾರರೂ ಹೌದು ಎಂಬುದು ನಿಮ್ಮ ಪೂರ್ವಿಕರ ಬದುಕನ್ನು ಚಿತ್ರಿಸುವ ನಿಮ್ಮ ಕಲ್ಪನಾಶೀಲತೆಯಲ್ಲಿ ಮತ್ತು ಗದ್ಯ ಕೌಶಲ್ಯದಲ್ಲಿ ಕಾಣಬಹುದು. ಹಾಗೇ ನಿಮ್ಮ ಬದುಕಿನ ವಿವರಗಳನ್ನು ಮಂಡಿಸುವ ರೀತಿಯಲ್ಲಿ ನೀವು ತೋರಿರುವ ಸಂಯಮ ಮತ್ತು ಸಮಚಿತ್ತ ಮೆಚ್ಚುವಂತಹುದು. ಇದರಿಂದಾಗಿಯೇ ಪುಸ್ತಕದ ಕೆಲವು ಭಾಗಗಳು- ವಿಶೇಶವಾಗಿ ನಿಮ್ಮ ಪತ್ನಿಯ ಮೊದಲ ಹೆರಿಗೆಯ ಸಂದರ್ಭದ ಹಲವು ಚಿತ್ರಗಳು- ಹೃದಯ ಮುಟ್ಟುವಂತಿವೆ. ಓದುಗನ ಕಣ್ಣುಗಳನ್ನು ಆರ್ದ್ರಗೊಳಿಸುವಂತಿವೆ. ಒಟ್ಟಾರೆ ಪುಸ್ತಕದ ಕೊನೆಯ ಇಪ್ಪತ್ತು- ಮೂವ್ವತ್ತು ಪುಟಗಳ ಹೊರತಾಗಿ ನಿಮ್ಮ ಇಡೀ ಕೃತಿ ಮೆಚ್ಚುಗೆಯಾಗುವಂತಿದೆ.

ಆದರೆ ಕೊನೆಯ ಪುಟಗಳು ಇಡೀ ಪುಸ್ತಕದಲ್ಲಿ ಕಾಣುವ ಹೊಸ ಬದುಕಿಗಾಗಿ ನಡೆಸುವ ಹೋರಾಟದ ಕಥೆಯನ್ನು negate ಮಾಡುವಂತಿದೆ ಹಾಗೂ ಆರೋಪಿತ ಹಿರಿತನದ ಉಪದೇಶಾತ್ಮಕತೆಯಿಂದಾಗಿ ಕೃತಿ ವಿಚಲಿತವಾಗಿದೆ. ಇದಕ್ಕೆ ಕಾರಣ- ನಿಮ್ಮ ಕಥನ ವೈಯಕ್ತಿಕ ನೆಲೆಯಲ್ಲೇ ನಡೆದು, ಸಾಮಾಜಿಕತೆಯ ಆಯಾಮ ಪಡೆಯದೇ ಇರುವುದು. ಆದರೆ ಇದ್ದಕ್ಕಿದ್ದಂತೆ ಕೊನೆಯಲ್ಲಿ ಸಾಮಾಜಿಕವಾಗಲು ಹವಣಿಸುವುದು!

ಜಾತಿ ನಮ್ಮ ಸಾಮಾಜಿಕ ಮತ್ತು ರಾಷ್ಟ್ರ ಜೀವನದಲ್ಲಿ ಎಂತಹ ಒಡಕನ್ನು ಸೃಷ್ಟಿಸಿದೆ, ಏನೆಲ್ಲ ಅನಾಹುತಗಳನ್ನು ಮಾಡಿದೆ ಎಂಬುದರ ಬಗ್ಗೆ ಆಳವಾಗಿ ಯೋಚಿಸಬಲ್ಲವರು ಅಂತರ್ಜಾತಿ ವಿವಾಹಗಳನ್ನು ಬರೀ ಆಕಸ್ಮಿಕಗಳೆಂಬಂತೆ ಪರಿಗಣಿಸಬಾರದು. ತಂದೆತಾಯಿಗಳ ಒಪ್ಪಿಗೆಯಿಲ್ಲದೆ ಮದುವೆಯಾಗುವುದು ಒಳ್ಳೆಯದಲ್ಲವೆಂದು ಉಪದೇಶಿಸಲಾರರು. ಜಾತಿ ಕಾರಣದಿಂದಾಗಿ ತಮ್ಮ ಮಕ್ಕಳ ಮದುವೆಯನ್ನು ತಡೆಯುವ, ಅನಂತರ ಮಕ್ಕಳಿಗೆ ಹಿಂಸೆ ಕೊಡುವ ಯಾವ ತಂದೆತಾಯಿಗಳೂ ಕ್ಷಮಾರ್ಹರಲ್ಲ. ತಂದೆತಾಯಿಯರ ಅಭಿಪ್ರಾಯಕ್ಕೆ ವಿರೋಧವಾಗಿ ಮದುವೆಯಾದವರೆಲ್ಲ ಕಷ್ಟಕ್ಕೆ ಸಿಕ್ಕಿಕೊಂಡರೂ (ಸ್ವಲ್ಪ ಕಾಲ) ಇದ್ದಾರೆ, ಸುಖವಾಗಿರುವವರೂ ಇದ್ದಾರೆ. ಆದರೆ ನಿಮ್ಮಂತೆ ಕಷ್ಟಗಳಿಗೆಲ್ಲ ನಿಮ್ಮ ತಂದೆತಾಯಿಯರ ಮಾತನ್ನು ಕೇಳದಿದ್ದುದೇ ಮತ್ತು ನಂತರ ನಿಮ್ಮ ಸುಖ-ಸಂತೋಷಗಳಿಗೆಲ್ಲ ನಿಮ್ಮ ತಂದೆತಾಯಿಗಳ ಆಶೀರ್ವಾದವೇ ಕಾರಣವೆಂದು ಸೂಚಿಸುವುದು ನೀವು ಕಟ್ಟಿಕೊಂಡಿರುವ ದೈವ ಕಲ್ಪನೆಯನ್ನೇ ಅನುಮಾನಾಸ್ಪದಗೊಳಿಸುತ್ತದೆ. ಅಷ್ಟೇ ಅಲ್ಲ, ನಿಮ್ಮನ್ನು ಕುರಿತ ನಿಮ್ಮ ಪತ್ನಿಯ ಪ್ರೀತಿ-ಪ್ರೇಮ-ತ್ಯಾಗಗಳಿಗೇ ಧಿಕ್ಕಾರ ಹೇಳುವಂತಿದೆ. ನೀವು ಭಾವನಾತ್ಮಕತೆ ಎಂದು ಬಹುಶಃ ತಪ್ಪಾಗಿ ಭಾವಿಸಿರುವ ನಿಮ್ಮ ವ್ಯಕ್ತಿತ್ವದಲ್ಲಿನ ಅಳುಬುರುಕುತನದ ಅನಾಹುತಗಳಿಂದ ರಕ್ಷಿಸಿರುವರೇ ನಿಮ್ಮ ಪತ್ನಿಯೆಂದು ಈ ಪುಸ್ತಕ ಪರೋಕ್ಷವಾಗಿಯಾದರೂ ನಿರೂಪಿಸುತ್ತದೆ. ಹಾಗೆ ನೋಡಿದರೆ ಈ ಪುಸ್ತಕದಲ್ಲಿ ಓದುಗರಿಗೆ ಅತಿ ಮೆಚ್ಚುಗೆಯಾಗುವರೆಂದರೆ (ಅವರ ಕ್ರೈಸ್ತಮತಮೌಡ್ಯತೆ ಅಥವಾ ಅತಿ ಅಭಿಮಾನದದ ಹೊರತಾಗಿ) ನಿಮ್ಮ ಪತ್ನಿಯವರೇ! ಅವರಿಗೆ ನನ್ನ ಅಭಿನಂದನೆಗಳು.

ಈ ಪುಸ್ತಕದ ಈ ಮುಖ್ಯ ಬಿರುಕುವಿನ ಹಿಂದೆ, ನೀವು ದಲಿತರಾಗಿ ಹುಟ್ಟಿಯೂ ನಿಮ್ಮ ಅನುಕೂಲ ಆರ್ಥಿಕ ಪರಿಸ್ಥಿತಿಯಿಂದಾಗಿ ಜಾತಿಪದ್ಧತಿಯನ್ನು ಮುಖಾಮುಖಿಯಾಗಿಸಿಕೊಳ್ಳುವ ಸಂದರ್ಭ ಬರದೆ, ನೀವು ಸುಲಭವಾಗಿ ‘ಮಧ್ಯಮ ವರ್ಗ’ಕ್ಕೆ ಪ್ರವೇಶ ಪಡೆದು ಆ ಬಗ್ಗೆ ನೀವು ಆಲೋಚನೆ ಮಾಡದಾಗಿರುವುದೂ ಒಂದು ಕಾರಣವಾಗಿ ನನಗೆ ಕಾಣುತ್ತದೆ. ಹಾಗೇ ಎರಡನೇ ಭಾಷೆಯಾಗಿ ನಿಮ್ಮ ಸಂಸ್ಕೃತ ವಿದ್ಯಾಭ್ಯಾಸವೂ ಕೂಡಾ! ಅದನ್ನಾಧರಿಸಿದ ನಿಮ್ಮ ದೈವ ಕಲ್ಪನೆ!!

ಒಟ್ಟಿನಲ್ಲಿ ನಿಮ್ಮ ಸಾಹಸದ ಬದುಕಿನಲ್ಲಿ ನೀವು ಅಂತಿಮವಾಗಿ ಗೆದ್ದಿದ್ದರೂ, ಪುಸ್ತಕದಲ್ಲಿ ಮಾತ್ರ ಗೆದ್ದ ಸಂಭ್ರಮವಿಲ್ಲದೆ, ಸೋತವರ ಆಯಾಸವೇ ಎದ್ದು ಕಾಣುವಂತಾಗಿರುವುದು ದುರದೃಷ್ಟಕರ. ಬದುಕು ಅಂತಿಮವಾಗಿ ಗೆಲುವು-ಸೋಲುಗಳನ್ನು ಮೀರಿದ್ದಾದರೂ, ಅದನ್ನು ದಾಖಲಿಸ ಹೊರಟಾಗ ಅಂತಿಮ ‘ಸಂದೇಶ’ ಮುಖ್ಯವಾಗುತ್ತದೆ. ಈ ದೃಷ್ಟಿಯಿಂದ ನಿಮ್ಮ ಪುಸ್ತಕ ನನ್ನಲ್ಲಿ ಅತೃಪ್ತಿ ಉಂಟುಮಾಡಿತು. ಮಿಕ್ಕಂತೆ ಪುಸ್ತಕ ಒಳ್ಳೆಯ ದಾಖಲೆ. ಹಾಗಾಗಿಯೇ ಈ ದೀರ್ಘ ಪತ್ರ. ಬೇಸವಿದ್ದರೆ ಕ್ಷಮಿಸಿ.

ವಿಶ್ವಾಸದ
-ಡಿ.ಎಸ್.ನಾಗಭೂಷಣ

(8-5-2010)