| Reviews from Newpapaers | |
|
ದಿನಪತ್ರಿಕೆಗಳಿಂದ ವಿಮರ್ಶೆಗಳು “ಗೆರೆ ದಾಟಿದ ಮೇಲೆ’’ ಪ್ರಜಾವಾಣಿ
ಇದು ಬ್ಯಾಂಕ್ ಅಧಿಕಾರಿ ಪರಶಿವಮೂರ್ತಿ ಅವರ ಆತ್ಮಕತೆ. ವಿದ್ಯಾರ್ಥಿದೆಸೆಯಿಂದ ಕುದುರಿಸಿಕೊಂಡಿದ್ದ ಸಾಹಿತ್ಯದ
ಆಸಕ್ತಿ ನಿವೃತ್ತಿಯ ನಂತರ ಜಾಗೃತವಾಗಿ ಆತ್ಮಕಥನ ರೂಪದಲ್ಲಿ ಹೊರಹೊಮ್ಮಿರುವುದು ಇದರ ವೈಶಿಷ್ಟ.
... ಪರಶಿವಮೂರ್ತಿ ಬಾಲ್ಯದ ಬಡತನದ ಚಿತ್ರಣ ನೀಡುತ್ತಾರೆ. ಆದರೆ ಅದು ಸಮುದಾಯವಾಗಿ ಅನುಭವಿಸಿದ ಪರಿಸ್ಥಿತಿಯನ್ನು
ವಿವರಿಸುವುದಿಲ್ಲ. ಅವರಿಗೆ ಗೆಳೆತನ, ಸುಖ, ನೆಮ್ಮದಿ, ಪ್ರೀತಿ ಮುಖ್ಯ. ಪ್ರೀತಿಸಿ ಮದುವೆಯಾದ ವ್ಯಕ್ತಿ ಹೋರಾಟದಿಂದ
ಕಟ್ಟಿಕೊಳ್ಳುವ ಬದುಕು, ಪಡೆಯುವ ನೆಮ್ಮದಿ, ಗಳಿಸುವ ಸುಖ ಇತ್ಯಾದಿಗಳ ಸ್ವಾರಸ್ಯಕರ ವಿವರಗಳಿವೆ. ಸಣ್ಣ ಸಣ್ಣ
ವಾಕ್ಯಗಳಿಂದ ಸನ್ನಿವೇಶವನ್ನು ಕಟ್ಟಿಕೊಡುವ ಇಲ್ಲಿನ ಗದ್ಯ ಗಮನಾರ್ಹವಾಗಿದೆ. ಕ್ರೈಸ್ತ ಹುಡುಗಿಯನ್ನು ಪ್ರೀತಿಸಿ
ಮದುವೆಯಾಗುವ ಅವರದು ಬದುಕಿನ ಧರ್ಮ. ಮಾನವೀಯ ಕಾಳಜಿ. ಅದು ಕೃತಿಯುದ್ದಕ್ಕೂ ತೆರೆದುಕೊಳ್ಳುತ್ತದೆ. ಆದ್ದರಿಂದ ಇದು
ಕಾದಂಬರಿಯಂತೆ ಓದಿಸಿಕೊಳ್ಳುತ್ತದೆ. ಹನೂರರ ಮುನ್ನುಡಿ ಚೊಕ್ಕದಾದ ಪ್ರವೇಶ ಒದಗಿಸುತ್ತದೆ.
-ಪ್ರಜಾವಾಣಿ (೯-೫-೨೦೧೦)
ವಿಜಯ ಕರ್ನಾಟಕ
ಹಳೆಯ ಟ್ರಂಕ್ ತೆಗೆದಾಗ, ಯಾವುದೋ ಕಾಲದಲ್ಲಿ ತಾವು ಬರೆದಿದ್ದ ಪ್ರೇಮಪತ್ರಗಳು, ತಪ್ಪದೇ ಬರೆಯುತ್ತಿದ್ದ ಡೈರಿಗಳು
ಸಿಕ್ಕಿದ್ದರಿಂದ ಆತ್ಮಕಥನವನ್ನು ಬರೆಯುವ ಆಸೆ ಉಂಟಾಯಿತು ಎನ್ನುತ್ತಾರೆ ಬ್ಯಾಂಕ್ ಅಧಿಕಾರಿಯಾಗಿರುವ ಲೇಖಕ
ಪರಶಿವಮೂರ್ತಿ. ‘ತಮ್ಮ ಅನುಭವಗಳನ್ನು ಅತ್ಯಂತ ಪ್ರಾಮಾಣಿಕವಾಗಿ ನಿರೂಪಿಸಿಕೊಂಡು ಹೋಗುವ ಲೇಖಕರ ಅನುಭವವೇ ಒಮ್ಮೊಮ್ಮೆ
ಓದುಗರ ಅನುಭವವೂ ಆಗಿಬಿಡುತ್ತದೆ. ಆತ್ಮಕಥನಗಳು ಸೋಲುವುದು ವೈಯಕ್ತಿಕ ಅನುಭವಗಳನ್ನು ಸಾವ್ರತ್ರಿಕವಾಗಿಸದೇ
ಹೋಗುವಲ್ಲಿ. ಆದರೆ ಪರಶಿವಮೂರ್ತಿಯವರ ಅನುಭವಕಥನ ಓದುಗರ ಅನುಭವಗಳನ್ನು ಹಂಚಿಕೊಂಡೇ ನಡೆಯುತ್ತದೆ’ ಎಂದು ಡಾ.
ಕೃಷ್ಣಮೂರ್ತಿ ಹನೂರು ಮುನ್ನುಡಿಯಲ್ಲಿ ಗುರುತಿಸಿದ್ದಾರೆ. ಆದರೆ ಲೇಖಕರ ಆರೋಪಿತ ಗಾಂಭೀರ್ಯ, ಪ್ರಾಮುಖ್ಯ ಒಮ್ಮೊಮ್ಮೆ
ಅತಿ ಭಾವುಕ ಎನ್ನಿಸುವ ಶೈಲಿ ಈ ಪ್ರಕ್ರಿಯೆಗೆ ಸ್ವಲ್ಪ ಅಡ್ಡಿಯನ್ನೇ ಮಾಡುತ್ತಿದೆ ಎನ್ನಬಹುದು.
- ವಿಜಯ ಕರ್ನಾಟಕ (೧೬-೫-೨೦೧೦)
ಕನ್ನಡ ಪ್ರಭ (27-6-2010)
ಒಂದು ಉತ್ತಮ ಆತ್ಮಕತೆ
ತಮ್ಮ ಪೂರ್ವಜರ ಜೀವನದ ಒಂದು ಮುಖ್ಯ ಘಟನೆಯಿಂದ ತಮ್ಮ ಈ ಕಥನವನ್ನು ಆರಂಭಿಸಿರುವ ಮೂರ್ತಿಯವರು, ನಂತರದ
ಅಧ್ಯಾಯಗಳಲ್ಲಿ ಮಂಡ್ಯದಲ್ಲಿದ್ದ ತಮ್ಮ ಕೂಡು ಕುಟುಂಬದ ಹಿರಿಯ ಸದಸ್ಯರಾಗಿದ್ದ ದೊಡ್ಡಪ್ಪ ಮತ್ತು ಚಿಕ್ಕಪ್ಪಂದಿರ
ವ್ಯಕ್ತಿತ್ವದ ವಿಶಿಷ್ಟತೆಗಳನ್ನು ಹಲವು ಘಟನಾವಳಿಗಳ ಮೂಲಕ ಚಿತ್ರಿಸಿದ್ದಾರೆ.
‘ತಾಯಿಯಿಂದ ದೊರಕದ ಪ್ರೀತಿಯನ್ನು ಬೇರೆ ಕಡೆ ಪಡೆದುಕೊಳ್ಳಲು ಹಾತೊರೆದು, ಓದುವ ಸಮಯದಲ್ಲಿ ಓದದೆ,
ಕರ್ತವ್ಯವಿಮುಖನಾದುದಕ್ಕೆ ನನ್ನ ತಾಯಿಯನ್ನೇ ದೂಷಣೆಗೆ ಗುರಿಮಾಡಿದ್ದೆ; ನಾನು ಮದುವೆಯಾಗಿ ಮಗುವಿನ ತಂದೆಯಾಗುವ ತನಕ.
ನಮ್ಮ ತಪ್ಪು ನಿರ್ಧಾರಗಳಿಗೆ, ನಮ್ಮ ತಪ್ಪು ನಡವಳಿಕೆಗಳಿಗೆ ನಮ್ಮ ಹೆತ್ತವರನ್ನು ಕಾರಣಕರ್ತರನ್ನಾಗಿ ಮಾಡುವುದು ಎಂತಹ
ಅಪ್ರಬುದ್ಧತೆ ಎನ್ನುವುದು ಅರಿವಾಯಿತು.’..(ಪುಟ, ೩೪೬) ಎಂದು ಹೇಳಿರುವ ಅವರು ಈ ಆತ್ಮಕತೆಯನ್ನು ಅವರ ತಾಯಿಯವರಿಗೇ
ಅರ್ಪಿಸಿದ್ದಾರೆ.
ಇಂದು ನಮ್ಮ ಸಮಾಜದಲ್ಲಿ ಜಾತ್ಯಾತೀತ (ಸೆಕ್ಯುಲರ್) ಮನೋಭಾವ ರೂಪಿಸುವಲ್ಲಿ ನಮ್ಮ ಆಧುನಿಕ ಸಂಸ್ಥೆಗಳಾದ ಶಾಲಾ
ಕಾಲೇಜುಗಳು, ಕಛೇರಿಗಳು, ಕಾರ್ಖಾನೆಗಳು ಮಹತ್ವದ ಪಾತ್ರ ವಹಿಸುತ್ತಿವೆ ಎಂದು ನಮ್ಮ ಪ್ರಮುಖ ಸಮಾಜಶಾಸ್ತ್ರಜ್ಞರಲ್ಲಿ
ಒಬ್ಬರಾದ ಆಂದ್ರೆ ಬೆತ್ತೆಯವರು ಹೇಳಿದ್ದಾರೆ. ಪರಶಿವಮೂರ್ತಿಯವರ ಈ ಆತ್ಮಕತೆ, ಬೆತ್ತೆಯವರ ಹೇಳಿಕೆಗೆ ಅನೇಕ
ಪುರಾವೆಗಳನ್ನು ಒದಗಿಸುತ್ತದೆ. ಪುಸ್ತಕದ ಮುದ್ರಣ ಮತ್ತು ವಿನ್ಯಾಸಗಳು ಬಹಳ ಆಕರ್ಷಕವಾಗಿದ್ದು ಮುದ್ರಣ ದೋಷಗಳು
ಕಡಿಮೆ ಸಂಖ್ಯೆಯಲ್ಲಿವೆ.
|